ADVERTISEMENT

ಶಿರಾ ಉಪಚುನಾವಣೆ: ಕ್ಷೇತ್ರದ ಹೊರಗೂ ಕಾವು

ಠಿಕಾಣಿ ಹೂಡಿದ ಚಿತ್ರದುರ್ಗ ರಾಜಕಾರಣಿಗಳು l ಪ್ರಚಾರದಲ್ಲಿ ಸಚಿವರ ಗೈರು; ಚರ್ಚೆ

ಜಿ.ಬಿ.ನಾಗರಾಜ್
Published 29 ಅಕ್ಟೋಬರ್ 2020, 18:35 IST
Last Updated 29 ಅಕ್ಟೋಬರ್ 2020, 18:35 IST

ಚಿತ್ರದುರ್ಗ: ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯ ಕಾವು ಪಕ್ಕದ ಕೋಟೆನಾಡಿಗೂ ವಿಸ್ತರಿಸಿದೆ. ಚಿತ್ರದುರ್ಗದ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ದಂಡು ಶಿರಾ ತಾಲ್ಲೂಕಿನ ಹಳ್ಳಿ–ಹಟ್ಟಿಗಳ ಗಲ್ಲಿಗಳಲ್ಲೂ ಕಾಣಿಸುತ್ತಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಶಿರಾ ವಿಧಾನಸಭಾ ಕ್ಷೇತ್ರದ ಫಲಿತಾಂಶ ಕೋಟೆನಾಡನ್ನು ಪ್ರಭಾವಿಸಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚು ಮತ ಸಿಕ್ಕಿರುವುದು ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಿಸಿದೆ. ಆಗ ಕೈತಪ್ಪಿದ ಮತಗಳನ್ನು ಮರಳಿ ಪಡೆಯುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿದ್ದಾರೆ.

ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಶಿರಾ ಉಪಚುನಾವಣೆಯ ಉಸ್ತುವಾರಿಯನ್ನು ಬಿಜೆಪಿ ನೀಡಿದೆ. ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಮೂರು ವಾರಗಳಿಂದ ಕ್ಷೇತ್ರ ಸುತ್ತುತ್ತಿದ್ದಾರೆ. ಕಾಂಗ್ರೆಸ್‌ನ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮಾಜಿ ಸಚಿವ ಎಚ್‌.ಆಂಜನೇಯ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ. ಮೂರೂ ಪಕ್ಷಗಳ ಎಡಗೈ, ಗೊಲ್ಲ ಹಾಗೂ ಕುಂಚಿಟಿಗ ಸಮುದಾಯದ ನಾಯಕರು, ಕಾರ್ಯಕರ್ತರು ಶಿರಾದಲ್ಲಿ ಠಿಕಾಣಿ ಹೂಡಿದ್ದಾರೆ.

ADVERTISEMENT

ಶಿರಾ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಸಾಂಸ್ಕೃತಿಕ, ಭೌಗೋಳಿಕ ಹಾಗೂ ರಾಜಕೀಯ ಸಾಮ್ಯತೆ ಢಾಳಾಗಿ ಗೋಚರಿಸುತ್ತವೆ. ಇದನ್ನು ಅರಿತ ರಾಜಕೀಯ ಪಕ್ಷಗಳು, ಹಿರಿಯೂರು, ಹೊಸದುರ್ಗ, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಕಾರ್ಯಕರ್ತರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

ಹೊರ ಜಿಲ್ಲೆಯಿಂದ ಬಂದಿರುವ ಬಹುತೇಕ ರಾಜಕೀಯ ನಾಯಕರು, ಕಾರ್ಯಕರ್ತರು ಹಿರಿಯೂರು ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿತ್ಯ ಬೆಳಿಗ್ಗೆ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಪ್ರಚಾರ ಕಾರ್ಯ ಮುಗಿಸಿ ರಾತ್ರಿ ಮರಳುತ್ತಿದ್ದಾರೆ. ಸ್ಥಳೀಯ ನಾಯಕರು ಇದಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.