ADVERTISEMENT

ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 12:50 IST
Last Updated 28 ಜುಲೈ 2019, 12:50 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಅಥಣಿ (ಬೆಳಗಾವಿ ಜಿಲ್ಲೆ): ‘ರಾಜ್ಯದಲ್ಲಿ ವರ್ಷದೊಳಗೆ ಯಾವಾಗ ಬೇಕಾದರೂ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗಬಹುದು’ ಎಂದು ಶಾಸಕ, ಕಾಂಗ್ರೆಸ್‌ನಾಯಕ ಸತೀಶ ಜಾರಕಿಹೊಳಿ ಭವಿಷ್ಯ ನುಡಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಆ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಈಗ ಅನರ್ಹಗೊಂಡಿರುವ ಅತೃಪ್ತ ಶಾಸಕರಲ್ಲಿ ಒಟ್ಟು 4 ಗುಂಪುಗಳಿವೆ. ರಮೇಶ ಜಾರಕಿಹೊಳಿ, ಬೆಂಗಳೂರಿನವರು, ಜೆಡಿಎಸ್‌ನವರು ಹಾಗೂ ಶಾಸಕ ನಾಗೇಂದ್ರ ಬೆಂಬಲಿಗರ ಗುಂಪುಗಳು. ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳ್ಳಲು ರಮೇಶ ಜಾರಕಿಹೊಳಿ ಕಾರಣ. ಮೊದಲಿಗೆ ಬಂಡಾಯ ಆರಂಭಿಸಿದ್ದೇ ಅವರು’ ಎಂದು ಟೀಕಿಸಿದರು.

ADVERTISEMENT

‘ಬೆಳಗಾವಿ ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ ಶಾಸಕರು ಅನರ್ಹಗೊಂಡಿದ್ದಾರೆ. ಹೀಗಾಗಿ, ಇಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಎಲ್ಲ ಕಡೆಯೂ ಕಾರ್ಯಕರ್ತರು, ಮುಖಂಡರ ನಡೆಸುತ್ತಿದ್ದೇನೆ. ಉಪ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಪಕ್ಷದ ಟಿಕೆಟ್‌ಗೆ ಬಹಳ ಬೇಡಿಕೆ ಇದೆ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಕಳುಹಿಸಲಾಗುವುದು. ಹೈಕಮಾಂಡ್ ಅಂತಿಮ ನಿರ್ಧಾರ ಮಾಡುತ್ತದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.