ADVERTISEMENT

ಲೋಕಸಭಾ ಚುನಾವಣೆ: ಖಾಸಗಿ ಬಸ್‌ ಪ್ರಯಾಣ ದರ ದುಬಾರಿ

ಶೇ 50ರಷ್ಟು ಹೆಚ್ಚಳ

ಸಂತೋಷ ಜಿಗಳಿಕೊಪ್ಪ
Published 24 ಮಾರ್ಚ್ 2019, 19:38 IST
Last Updated 24 ಮಾರ್ಚ್ 2019, 19:38 IST
ಬಸ್‌ ಪ್ರಯಾಣಿಕರು– ಸಂಗ್ರಹ ಚಿತ್ರ
ಬಸ್‌ ಪ್ರಯಾಣಿಕರು– ಸಂಗ್ರಹ ಚಿತ್ರ   

ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನಕ್ಕಾಗಿ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ಮತದಾರರು, ದುಬಾರಿ ದರ ಕೊಟ್ಟು ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಬೆಳೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಏ. 18ರಂದು ಮೊದಲ ಹಂತದ ಮತದಾನ ನಡೆಯಲಿದೆ. ಆ ಕ್ಷೇತ್ರಗಳ ಹಲವು ಮತದಾರರು, ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದು ಉಳಿದುಕೊಂಡಿದ್ದಾರೆ. ಅಂಥ ಮತದಾರರು, ತಮ್ಮೂರಿಗೆ ತೆರಳಿ ಮತದಾನ ಹಕ್ಕು ಚಲಾಯಿಸಲಿದ್ದಾರೆ.

ಇಂಥ ಸಂದರ್ಭದಲ್ಲೇ ಖಾಸಗಿ ಕಂಪನಿಗಳು, ಮತದಾನದ ಮುನ್ನಾದಿನವಾದ ಏ. 17ರಂದು ಬಸ್‌ಗಳ ಪ್ರಯಾಣ ದರವನ್ನು ಶೇ 50ರಷ್ಟು ಹೆಚ್ಚಿಸಿರುವುದಾಗಿ ಪ್ರಯಾಣಿಕರು ಆರೋಪಿಸುತ್ತಿದ್ದಾರೆ.

ADVERTISEMENT

‘ಬೆಂಗಳೂರಿನಿಂದ ಉಡುಪಿಗೆ ಸಾಮಾನ್ಯ ದಿನಗಳಲ್ಲಿ ₹600ರಿಂದ ₹750 ದರ ಇರುತ್ತದೆ. ಏ. 17ರಂದು ₹1,050ರಿಂದ ₹1,550 ಮಾಡಲಾಗಿದೆ.ಪ್ರಯಾಣಿಕರು, ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಲಾರಂಭಿಸಿದ್ದಾರೆ. ದರ ಏರಿಕೆ ಆಗಿರುವುದರಿಂದ, ಪರಿವಾರ ಸಮೇತ ಊರಿಗೆ ಹೋಗಬೇಕು ಎಂದುಕೊಂಡವರಿಗೆ ನಿರಾಸೆ ಉಂಟಾಗುತ್ತಿದೆ’ ಎಂದು ಖಾಸಗಿ ಕಂಪನಿಯ ಉದ್ಯೋಗಿ ಬಿ. ಸುನೈಲ್ ತಿಳಿಸಿದರು.

‘ಮತದಾನದ ಪ್ರಮಾಣ ಹೆಚ್ಚಳವಾಗಬೇಕೆಂದು ಚುನಾವಣಾ ಆಯೋಗ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿಯೊಬ್ಬ ಭಾರತೀಯನು ಮತದಾನ ಚಲಾಯಿಸಬೇಕು. ಅದು ಅವನ ಹಕ್ಕು. ಆದರೆ, ಈ ಹಕ್ಕನ್ನೇ ಖಾಸಗಿ ಕಂಪನಿಗಳು ತಮ್ಮ ಲಾಭ ಗಳಿಕೆಗೆ ಬಳಸಿಕೊಳ್ಳುತ್ತಿವೆ’ ಎಂದು ಕಿಡಿಕಾರಿದರು.

ದರಕ್ಕೆ ಕಡಿವಾಣ ಹಾಕಿ: ‘ಎ.ಸಿ/ನಾನ್‌ ಎ.ಸಿ, ಸೀಟರ್/ಸ್ಲೀಪರ್‌ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಮತದಾನಕ್ಕೆ ಹಲವು ದಿನಗಳು ಬಾಕಿ ಇದ್ದು, ಸಾರಿಗೆ ಇಲಾಖೆಯು ಕೂಡಲೇ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗವಾದರೂ ಇಲಾಖೆಗೆ ಸೂಚನೆ ನೀಡಬೇಕು’ ಎಂದು ಖಾಸಗಿ ಕಂಪನಿ ಉದ್ಯೋಗಿ ಅಭಿಷೇಕ್ ಒತ್ತಾಯಿಸಿದರು.

ಎರಡನೇ ಹಂತ ಮತ್ತಷ್ಟು ದುಬಾರಿ: ರಾಜ್ಯದ 14 ಕ್ಷೇತ್ರಗಳಲ್ಲಿ (ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳು) ಏಪ್ರಿಲ್ 23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಅದರ ಮುನ್ನಾದಿನವಾದ ಏ. 22ರಂದು ಬೆಂಗಳೂರಿನಿಂದ ಬಸ್ಸಿನಲ್ಲಿ ತಮ್ಮೂರಿಗೆ ಹೋಗುವ ಮತದಾರರಿಗೂ ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ.

ಲಭ್ಯರಾಗದ ಸಾರಿಗೆ ಆಯುಕ್ತ: ‘ನಿಗದಿಗಿಂತ ಹೆಚ್ಚು ಪ್ರಯಾಣ ದರ ವಸೂಲು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಾರಿಗೆ ಇಲಾಖೆಯ ಆಯುಕ್ತವಿ.ಪಿ. ಇಕ್ಕೇರಿ ಅವರು ಕೆಲ ತಿಂಗಳ ಹಿಂದಷ್ಟೇ ಪತ್ರಿಕಾ ಪ್ರಕಟಣೆ ನೀಡಿದ್ದರು. ಈಗ ದರ ಏರಿಕೆ ಆಗಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅವರು ಲಭ್ಯರಾಗಲಿಲ್ಲ.

ಕೆಎಸ್‌ಆರ್‌ಟಿಸಿ ದರವೂ ದುಬಾರಿ

ಮತದಾನದ ಮುನ್ನಾದಿನ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರವನ್ನೂ ಏರಿಕೆ ಮಾಡಲಾಗಿದೆ. ಖಾಸಗಿ ಬಸ್‌ಗಳ ಪ್ರಯಾಣ ದರಕ್ಕಿಂತ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ಸ್ವಲ್ಪ ಕಡಿಮೆ ಎಂಬುದು ಸಮಾಧಾನದ ಸಂಗತಿ.

ಬೆಂಗಳೂರಿನಿಂದ ಉಡುಪಿಗೆ ಸಾಮಾನ್ಯ ದಿನಗಳಲ್ಲಿ ₹913 ಪ್ರಯಾಣ ದರವಿದೆ. ಏ. 17ರಂದು ದರವನ್ನು ₹ 1078ಕ್ಕೆ ಏರಿಕೆ ಮಾಡಲಾಗಿದೆ. ಉಳಿದ ನಗರಗಳ ಪ್ರಯಾಣ ದರವೂ ಅದೇ ರೀತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.