ADVERTISEMENT

ವಿದ್ಯುತ್ ದರ ಹೆಚ್ಚಳ | ಬಿಜೆಪಿ ಸರ್ಕಾರದ ಅವಧಿಯ ನಿರ್ಧಾರ: ಕೆ.ಜೆ. ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 19:18 IST
Last Updated 20 ಮಾರ್ಚ್ 2025, 19:18 IST
ಕೆ.ಜೆ. ಜಾರ್ಜ್‌
ಕೆ.ಜೆ. ಜಾರ್ಜ್‌   

ಬೆಂಗಳೂರು: ‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿ ಹಣದ ವಿಷಯವಾಗಿ ಹೈಕೋರ್ಟ್‌ 2024ರ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪನ್ನು ಆಧರಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ದರ ಹೆಚ್ಚಳದ ಆದೇಶ ಹೊರಡಿಸಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

‘ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ(ಕೆಇಬಿ)ಯನ್ನು ರದ್ದುಗೊಳಿಸಿ ಕೆಪಿಟಿಸಿಎಲ್ ‌ಹಾಗೂ ಐದು ಎಸ್ಕಾಂಗಳನ್ನು ರಚಿಸಲಾಯಿತು. 2022ರ ಮಾರ್ಚ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಪಿಂಚಣಿ ಮತ್ತು ಗ್ರಾಚ್ಯುಟಿಯ ಸರ್ಕಾರದ ಪಾಲನ್ನು ಗ್ರಾಹಕರಿಂದ ಪಡೆಯಲು ಆದೇಶಿಸುವಂತೆ ಕೆಇಆರ್‌ಸಿ ಮುಂದೆ ಮೊದಲ ಬಾರಿಗೆ ಪ್ರಸ್ತಾವ ಸಲ್ಲಿಸಿತ್ತು. ಇದನ್ನು ಕೆಇಆರ್‌ಸಿ ಪುರಸ್ಕರಿಸಿರಲಿಲ್ಲ’ ಎಂದು ಅವರು ವಿವರಿಸಿದರು.

‘ಈ ಪ್ರಸ್ತಾವವನ್ನು ಪ್ರಶ್ನಿಸಿ ಎಫ್‌ಕೆಸಿಸಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ 2024ರ ಮಾರ್ಚ್‌ 25ರಂದು ಅರ್ಜಿಯನ್ನು‌ ತಿರಸ್ಕರಿಸಿತ್ತು. ಇದನ್ನು ಆಧರಿಸಿ 2024ರ ನವೆಂಬರ್‌ 30ರಂದು ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳು ಮತ್ತೆ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಪುರಸ್ಕರಿಸಿ ಕೆಇಆರ್‌ಸಿ ಆದೇಶ ಹೊರಡಿಸಿದೆ‘ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘2022ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕರ್ನಾಟಕ ವಿದ್ಯುತ್‌ ಸುಧಾರಣಾ ನಿಯಮಗಳಿಗೆ ತಿದ್ದುಪಡಿ ತರಲಾಗಿತ್ತು. ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಯ ಪಾಲನ್ನು ಗ್ರಾಹಕರಿಂದ ಪಡೆಯಲು ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ತಿದ್ದುಪಡಿಯಲ್ಲಿ ಹೇಳಲಾಗಿತ್ತು. ಇದು ಮತ್ತು ಹೈಕೋರ್ಟ್‌ ತೀರ್ಪು ಆಧರಿಸಿ ಕೆಇಆರ್‌ಸಿ ದರ ಹೆಚ್ಚಳ ಮಾಡಿದೆ’ ಎಂದು ಮಾಹಿತಿ ನೀಡಿದರು.

ಆರ್. ಅಶೋಕ  
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಯೋಗ್ಯತೆ ಇಲ್ಲದೇ ಹೀಗೆ ಪರೋಕ್ಷವಾಗಿ ದರ ಏರಿಕೆ ಮಾಡುತ್ತಿದ್ದಾರೆ. ದರ ಏರಿಕೆ ಸಿದ್ದರಾಮಯ್ಯ ಅವರ ಕಾರ್ಯಸೂಚಿಯಾಗಿದೆ
ಆರ್. ಅಶೋಕ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.