ADVERTISEMENT

ಅರ್ಹತೆ ಇದ್ದರೂ ಸಿಗದ ಹುದ್ದೆ: ವಯೋಮಿತಿ ಮೀರಿದ 631 ಅಭ್ಯರ್ಥಿಗಳ ಅಳಲು

ಬ್ರೇಕ್ ಇನ್‌ಸ್ಪೆಕ್ಟರ್: ವಯೋಮಿತಿ ಮೀರಿದ 631 ಅಭ್ಯರ್ಥಿಗಳ ಅಳಲು

ರಾಜೇಶ್ ರೈ ಚಟ್ಲ
Published 23 ಆಗಸ್ಟ್ 2022, 22:25 IST
Last Updated 23 ಆಗಸ್ಟ್ 2022, 22:25 IST
   

ಬೆಂಗಳೂರು: ಮೋಟಾರು ವಾಹನ ನಿರೀಕ್ಷಕ (ಐಎಂವಿ– ಬ್ರೇಕ್‌ ಇನ್‌ಸ್ಪೆಕ್ಟರ್‌) 141 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಪ್ರಕಟಿಸಿದ ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಅನರ್ಹರಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತವಾದ ಬೆನ್ನಲ್ಲೆ, ‘ಅರ್ಹತೆ’ ಇದ್ದೂ ಹುದ್ದೆ ಪಡೆಯುವ ಭಾಗ್ಯದಿಂದ ವಂಚಿತರಾಗಿದ್ದೇವೆ ಎಂದು ವಯೋಮಿತಿ ಮೀರಿದ 631 ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

‌150 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಆರು ವರ್ಷ ಎರಡು ತಿಂಗಳ ಬಳಿಕ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಸಾರಿಗೆ ಇಲಾಖೆಗೆ ಕೆಪಿಎಸ್‌ಸಿ ಸಲ್ಲಿಸಿದೆ. ಆದರೆ, ಈ ಪಟ್ಟಿಯಲ್ಲಿ ಇರುವವರಲ್ಲಿ ದೈಹಿಕ ಕ್ಷಮತೆ ಇಲ್ಲದಿರುವ, ಗ್ಯಾರೇಜ್ ಸೇವಾನುಭವದನಕಲಿ ಪ್ರಮಾಣಪತ್ರ ಸಲ್ಲಿಸಿದ ಕಾರಣಕ್ಕೆ ಕೆಲವರು ಹೊರಗುಳಿಯುವ ಸಾಧ್ಯತೆಗಳಿವೆ. ವೈದ್ಯಕೀಯ ಪರೀಕ್ಷೆಯೊಂದರಲ್ಲಿಯೇ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಫೇಲಾಗಿದ್ದಾರೆ.

‘2008ರಲ್ಲಿ ಕೆಪಿಎಸ್‌ಸಿ ಮೂಲಕ 124 ಹುದ್ದೆಗಳಿಗೆ ನೇಮಕಾತಿ (ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ) ನಡೆದ ಬಳಿಕ, 2016ರಲ್ಲಿ 150 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯಲ್ಲಿ ಸೂಚಿಸಿದಂತೆ ಒಂದು ವರ್ಷದ ಗ್ಯಾರೇಜ್‌ ಸೇವಾನುಭವ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿಷಯವು ಕೆಎಟಿ, ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಸುದೀರ್ಘ ಅವಧಿಯ ಬಳಿಕ ಕೆಪಿಎಸ್‌ಸಿ ಆಯ್ಕೆ ಪಟ್ಟಿ ಪ್ರಕಟಿಸಿದೆ. ಪಟ್ಟಿಯಲ್ಲಿ ಅನರ್ಹರಿರುವ ಕಾರಣಕ್ಕೆ ಮತ್ತು ಮೋಟಾರು ವಾಹನ ನಿರೀಕ್ಷಕ ಹುದ್ದೆಗಳ ತೀವ್ರ ಕೊರತೆ ಇರುವುದರಿಂದ ಇದೇ ಅಧಿಸೂಚನೆಗೆ ಹೆಚ್ಚುವರಿ ಹುದ್ದೆಗಳನ್ನು ಸೇರಿಸಬೇಕು’ ಎಂದು ವಯೋಮಿತಿ ಮೀರಿದ ಹುದ್ದೆ ವಂಚಿತ ಅರ್ಹ ಅಭ್ಯರ್ಥಿಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ADVERTISEMENT

‘ಸಿಬ್ಬಂದಿ ಕೊರತೆ ನೀಗಿಸಲು ಸಾರಿಗೆ ಇಲಾಖೆ ಇತರ ಇಲಾಖೆಗಳಿಂದ ಸಿಬ್ಬಂದಿಯನ್ನು ಎರವಲು ಸೇವೆ ಮೇಲೆ ನಿಯೋಜನೆ ಮಾಡಿಕೊಳ್ಳುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷಿತ ಮಟ್ಟದ ಆದಾಯ ಕ್ರೋಡೀಕರಿಸಲು ಸಾಧ್ಯವಾಗದೆ ವಾರ್ಷಿಕ ನೂರಾರು ಕೋಟಿ ಆರ್ಥಿಕ ನಷ್ಟ ಉಂಟಾಗುತ್ತಿದೆ. 150 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆಯಲ್ಲಿ, ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ ಎಂದು ತಿಳಿಸಲಾಗಿದೆ. ಹೀಗಾಗಿ, ಈ ಅಧಿಸೂಚನೆಗೆ ಹೆಚ್ಚುವರಿ ಹುದ್ದೆಗಳ ಸೇರ್ಪಡೆಗೆ ಅವಕಾಶವಿದೆ. ಬೇರೆ ಇಲಾಖೆಗಳ ನೇಮಕಾತಿಗಳಲ್ಲೂ ಅಧಿಸೂಚನೆಗಳಲ್ಲಿ ಸೂಚಿಸಿದ ಹುದ್ದೆಗಳ ಜೊತೆ ಖಾಲಿ ಇರುವ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೇರಿಸಿ ನೇಮಕಾತಿ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಖಾಲಿ ಇರುವ ಮೋಟಾರು ವಾಹನ ನಿರೀಕ್ಷಕ ಮತ್ತು ಹಿರಿಯ ಮೋಟಾರು ವಾಹನ ನಿರೀಕ್ಷಕ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದರು. ಹೀಗಾಗಿ, ಖಾಲಿ ಇರುವ 300 ಹುದ್ದೆಗಳನ್ನು ಇದೇ ನೇಮಕಾತಿ ಅಧಿಸೂಚನೆಯಲ್ಲಿ ಸೇರಿಸಿ, ಅವಕಾಶ ಕಲ್ಪಿಸಬೇಕು’ ಎಂದೂ
ಒತ್ತಾಯಿಸಿದ್ದಾರೆ.

ಬ್ರೇಕ್‌ ಇನ್‌ಸ್ಪೆಕ್ಟರ್‌ (ಐಎಂವಿ) ಹುದ್ದೆ ಸ್ಥಿತಿಗತಿ

ವೃಂದ; ಮಂಜೂರು; ಕಾರ್ಯನಿರತ; ಖಾಲಿ

ಐಎಂವಿ; 430; 122; 308

ಹಿರಿಯ ಐಎಂವಿ; 214; 86; 128

ಒಟ್ಟು; 644; 208; 436

‘ಕಾಯುವಿಕೆಯಿಂದ ಮೀರಿದ ವಯೋಮಿತಿ’

‘150 ಹುದ್ದೆಗೆ ಅರ್ಜಿ ಸಲ್ಲಿಸಿದ್ದ 2,048 ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಗಾಗಿ ಆರು ವರ್ಷ ಎರಡು ತಿಂಗಳಿನಿಂದ ಕಾಯುತ್ತಿದ್ದಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಕಂಫ್ಯೂಟರ್‌ ಆಧಾರಿತ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆ, ವೈದ್ಯಕೀಯ ತಪಾಸಣೆ, ಮೂಲ ದಾಖಲೆಗಳ ಪರಿಶೀಲನೆಯಲ್ಲಿ ಅರ್ಹರಾಗಿದ್ದಾರೆ. ಆದರೆ, ಕಾಯುವಿಕೆಯಲ್ಲೇ ವಯೋಮಿತಿ ಮೀರಿದ ಕಳೆದ ಕಾರಣ ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲದ ಪರಿಸ್ಥಿತಿ ಉಂಟಾಗಿದೆ’ ಎಂದು ಮುಖ್ಯಮಂತ್ರಿ, ಸಾರಿಗೆ ಸಚಿವರಿಗೆ ಹಲವು ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ.

‘ಕಾಯುವಿಕೆಯಿಂದ ಮೀರಿದ ವಯೋಮಿತಿ’

‘150 ಹುದ್ದೆಗೆ ಅರ್ಜಿ ಸಲ್ಲಿಸಿದ್ದ 2,048 ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಗಾಗಿ ಆರು ವರ್ಷ ಎರಡು ತಿಂಗಳಿನಿಂದ ಕಾಯುತ್ತಿದ್ದಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಕಂಫ್ಯೂಟರ್‌ ಆಧಾರಿತ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆ, ವೈದ್ಯಕೀಯ ತಪಾಸಣೆ, ಮೂಲ ದಾಖಲೆಗಳ ಪರಿಶೀಲನೆಯಲ್ಲಿ ಅರ್ಹರಾಗಿದ್ದಾರೆ. ಆದರೆ, ಕಾಯುವಿಕೆಯಲ್ಲೇ ವಯೋಮಿತಿ ಮೀರಿದ ಕಳೆದ ಕಾರಣ ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲದ ಪರಿಸ್ಥಿತಿ ಉಂಟಾಗಿದೆ’ ಎಂದು ಮುಖ್ಯಮಂತ್ರಿ, ಸಾರಿಗೆ ಸಚಿವರಿಗೆ ಹಲವು ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ.

141 ಹುದ್ದೆಗಳಿಗೆ ಆಯ್ಕೆ ಯಾದ ಅಭ್ಯರ್ಥಿಗಳ ದಾಖಲೆಗಳ ನೈಜತೆ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಹೆಚ್ಚುವರಿ ಯಾಗಿ ಹುದ್ದೆ ಸೇರ್ಪಡೆಗೆ ಸರ್ಕಾರ ದಿಂದ ಯಾವುದೇ ಪ್ರಸ್ತಾವ ಬಂದಿಲ್ಲ.

- ಟಿ.ಎಚ್‌.ಎಂ. ಕುಮಾರ್‌ ಆಯುಕ್ತ, ಸಾರಿಗೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.