ADVERTISEMENT

ನೌಕರರಿಗೆ ರಕ್ಷಣೆ: ಕಠಿಣ ಕಾನೂನಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 16:03 IST
Last Updated 22 ಜನವರಿ 2026, 16:03 IST
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ನೇತೃತ್ವದಲ್ಲಿ ಸಂಘದ ಪ್ರತಿನಿಧಿಗಳು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಮನವಿ ಸಲ್ಲಿಸಿದರು
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ನೇತೃತ್ವದಲ್ಲಿ ಸಂಘದ ಪ್ರತಿನಿಧಿಗಳು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಮನವಿ ಸಲ್ಲಿಸಿದರು   

ಬೆಂಗಳೂರು: ‘ನೌಕರರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳ ನಿಂದನೆ, ಕಿರುಕುಳ ನೀಡುತ್ತಿರುವವರನ್ನು ಶಿಕ್ಷೆಗೆ ಒಳಪಡಿಸಲು ಕಠಿಣ ಕಾನೂನು ರೂಪಿಸಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರನ್ನು ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರ ನೇತೃತ್ವದಲ್ಲಿ ಗುರುವಾರ ಭೇಟಿ ಮಾಡಿದ ಸಂಘದ ಪ್ರತಿನಿಧಿಗಳು ‘ಅಧಿಕಾರಿ–ನೌಕರರು ಮುಕ್ತ ವಾತಾವರಣದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು’ ಎಂದು ಮನವಿ ಸಲ್ಲಿಸಿದರು.

ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಮುಳಬಾಗಿಲು ತಹಶೀಲ್ದಾರ್‌ ಬಿ.ಕೆ. ಚಂದ್ರಶೇಖರ್‌ ಅವರ ಮೇಲೆ ಹಲ್ಲೆ ಸೇರಿದಂತೆ 14 ಪ್ರಕರಣಗಳಲ್ಲಿ ಸರ್ಕಾರಿ ನೌಕರರ ಮೇಲೆ ನಡೆದಿರುವ ದೌರ್ಜನ್ಯ, ಹಲ್ಲೆಯನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘2.73 ಲಕ್ಷ ಹುದ್ದೆಗಳು ಖಾಲಿ ಇದ್ದರೂ ರಾಜ್ಯದ ಅಭಿವೃದ್ಧಿಗಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ– ನೌಕರರ ಮೇಲೆ ಕೆಲವು ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ, ಕಿರುಕುಳ ನೀಡುವ ಪ್ರಕರಣಗಳು ಮರುಕಳಿಸುತ್ತಿವೆ. ಸರ್ಕಾರಿ ನೌಕರರ ರಕ್ಷಣೆಗೆ ಈಗಲಾದರೂ ಕಾನೂನು ರಚಿಸಬೇಕು’ ಎಂದು ಕೋರಲಾಗಿದೆ.

‘ಸಂಘದ ಪ್ರಸ್ತಾವಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿಯವರು ಈ ಹಿಂದೆ ವೈದ್ಯರ ಮೇಲೆ ಹಲ್ಲೆಯಾದಾಗ ರೂಪಿಸಲಾಗಿದ್ದ ನಿಯಮಗಳ ಮಾದರಿಯಲ್ಲಿಯೇ ನೌಕರರ ಮೇಲೆ ಹಲ್ಲೆ ಮಾಡಿದವರ ಮೇಲೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿಯಮಗಳನ್ನು ರೂಪಿಸಿ ಕೂಡಲೇ ಕಡತ ಮಂಡಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದರು’ ಎಂದು ಸಿ.ಎಸ್‌. ಷಡಾಕ್ಷರಿ ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಎಸ್.ಬಸವರಾಜು, ಹಿರಿಯ ಉಪಾಧ್ಯಕ್ಷ ಸುರೇಶ್ ಶೆಡಶ್ಯಾಳ, ಉಪಾಧ್ಯಕ್ಷರಾದ ಹರ್ಷ, ನೆಲ್ಕುದ್ರಿ ಸದಾನಂದ್, ಚೇತನ್ ಹಾಗೂ ಕಾರ್ಯದರ್ಶಿಗಳಾದ ಚಂದ್ರಶೇಖರ್, ನಾಗನಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.