ವರ್ಗಾವಣೆ
ಬೆಂಗಳೂರು: ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಡಿಪಿಎಆರ್) ಇಲಾಖೆ ಆದೇಶ ಹೊರಡಿಸಿದೆ.
ವರ್ಗಾವಣೆಗೆ ಮೇ 12ರಿಂದ ಜೂನ್ 14ರವರೆಗೆ ಅವಕಾಶ ನೀಡಿ ಈ ಹಿಂದೆ ಡಿಪಿಎಆರ್ ಆದೇಶ ಹೊರಡಿಸಿತ್ತು.
ಗ್ರೂಪ್ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ವರ್ಗದ ನೌಕರರನ್ನು ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ 6ರಷ್ಟನ್ನು ಮೀರದಂತೆ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ‘ಎ’ ಮತ್ತು ‘ಬಿ’ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಸಚಿವರಿಗೆ ಹಾಗೂ ‘ಸಿ’ ಮತ್ತು ‘ಡಿ’ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ.
ಒಂದು ಸ್ಥಳದಲ್ಲಿ ಎರಡು ವರ್ಷ ಕರ್ತವ್ಯದ ಅವಧಿ ಪೂರ್ಣಗೊಳಿಸಿದ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಅಧಿಕಾರಿಗಳು, ನಾಲ್ಕು ವರ್ಷ ಪೂರ್ಣಗೊಳಿಸಿದ ‘ಸಿ’ ವೃಂದದ ಹಾಗೂ ಏಳು ವರ್ಷ ಪೂರ್ಣಗೊಳಿಸಿದ ‘ಡಿ’ ವೃಂದದ ನೌಕರರು ವರ್ಗಾವಣೆಗೆ ಅರ್ಹರು. ‘ಎ’ ಮತ್ತು ‘ಬಿ’ ವೃಂದ ಅಧಿಕಾರಿಗಳ ವರ್ಗಾವಣೆ ಪ್ರಸ್ತಾವವನ್ನು ಆಡಳಿತ ಇಲಾಖೆಯ ಮೂಲಕವೇ ಸಚಿವರಿಗೆ ಸಲ್ಲಿಸಬೇಕು ಎಂದು ವರ್ಗಾವಣೆ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.