ADVERTISEMENT

ಎಂಜಿನಿಯರಿಂಗ್‌ ಪದವಿ: ಶೇ 10ರಷ್ಟು ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 20:15 IST
Last Updated 2 ಮಾರ್ಚ್ 2019, 20:15 IST
   

ಬೆಂಗಳೂರು: ರಾಜ್ಯದಲ್ಲಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳ ಶುಲ್ಕವನ್ನು 2019–20ನೇ ಶೈಕ್ಷಣಿಕ ವರ್ಷದಿಂದ ಶೇ 10ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ನಿವೃತ್ತ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್‌ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿಯು ಕಳೆದ ವರ್ಷ ಶೇ 8ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಿತ್ತು. ಹೀಗಾಗಿ, ಎರಡು ವರ್ಷಗಳಲ್ಲಿ ಶೇ 18ರಷ್ಟು ಶುಲ್ಕವನ್ನು ಹೆಚ್ಚಿಸಿದಂತಾಗಿದೆ.

ಕರ್ನಾಟಕ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಆಡಳಿತ ಮಂಡಳಿ ಒಕ್ಕೂಟದ ಸದಸ್ಯರೊಂದಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ಶನಿವಾರ ಮಾತುಕತೆ ನಡೆಸಿದ ಬಳಿಕ ಶುಲ್ಕ ಹೆಚ್ಚಳ ತೀರ್ಮಾನವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ADVERTISEMENT

‘ಯುಜಿಸಿ ನಿಗದಿಪಡಿಸಿರುವ ವೇತನ ಶ್ರೇಣಿಯನ್ನು ಪ್ರಾಧ್ಯಾಪಕರಿಗೆ ನೀಡಬೇಕಿದೆ. ಅಲ್ಲದೆ, ಕಾಲೇಜು ನಿರ್ವಹಣೆಯ ವೆಚ್ಚವೂ ಹೆಚ್ಚಳವಾಗಿದೆ. ಈ ಬಾರಿ ಶೇ 15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಕಾಲೇಜುಗಳ ಆಡಳಿತ ಮಂಡಳಿಗಳು ಮನವಿ ಮಾಡಿದ್ದವು. ಪೋಷಕರಿಗೆ ಹೊರೆಯಾಗಬಾರದೆಂದು ಶೇ 10ರಷ್ಟು ಮಾತ್ರ ಶುಲ್ಕ ಹೆಚ್ಚಳ ಮಾಡುತ್ತಿದ್ದೇವೆ. ಈ ತೀರ್ಮಾನಕ್ಕೆ ಮುಖ್ಯಮಂತ್ರಿಯೂ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದು ಸಚಿವ ದೇವೇಗೌಡ ಹೇಳಿದರು.

ಆನ್‌ಲೈನ್‌ ಸೇವೆಗೆ ಚಾಲನೆ: ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಆನ್‌ಲೈನ್‌ ಮೂಲಕ ಪಡೆಯುವ ‘ಸೇವಾಸಿಂಧು’ ಸೌಲಭ್ಯಕ್ಕೆ ಸಚಿವರು ಚಾಲನೆ ನೀಡಿದರು.

ವ್ಯಾಸಂಗ ಪ್ರಮಾಣಪತ್ರ, ಗ್ರಂಥಾಲಯದಿಂದ ಪತ್ರ, ಪದವಿಯ ತಾತ್ಕಾಲಿಕ ಪ್ರಮಾಣಪತ್ರ, ಡಿಪ್ಲೊಮಾ ಪ್ರಮಾಣಪತ್ರ, ಡಿಪ್ಲೊಮಾ ಅಂಕಪಟ್ಟಿ, ಪಠ್ಯಕ್ರಮ ದೃಢೀಕರಣ, ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆಯುವ ಹಾಗೂ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಇದರಲ್ಲಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೂಲಸೌಕರ್ಯ ಸುಧಾರಣೆಗಾಗಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ನಿಧಿ ಸಂಗ್ರಹಿಸಲು ಅನುಕೂಲವಾಗುವ ‘ಸಂಪ್ರದಾನ ಇ-ಪೋರ್ಟಲ್’ಗೂ ಚಾಲನೆ ನೀಡಲಾಯಿತು.

* ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಶುಲ್ಕದಲ್ಲಿ ಹೆಚ್ಚಳ ಮಾಡಿಲ್ಲ.

–ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.