ADVERTISEMENT

ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ 3 ಇಳಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 16:28 IST
Last Updated 5 ಆಗಸ್ಟ್ 2023, 16:28 IST

ಬೆಂಗಳೂರು: 2023-24ರ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್‌ ಕೋರ್ಸ್‌ಗಳ ಶುಲ್ಕವನ್ನು ರಾಜ್ಯ ಸರ್ಕಾರ ಶೇ 3ರಷ್ಟು ಇಳಿಕೆ ಮಾಡಿದೆ.

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಬೇಡಿಕೆಗೆ ಸಮ್ಮತಿಸಿದ್ದ ಹಿಂದಿನ ಬಿಜೆಪಿ ಸರ್ಕಾರ ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡಲು ಕಳೆದ ಏಪ್ರಿಲ್‌ನಲ್ಲಿ ಒಪ್ಪಿಗೆ ನೀಡಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಶುಲ್ಕ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ, ಆದೇಶ ಹಿಂಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಹಿಂದಿನ ಸರ್ಕಾರ ಒಪ್ಪಿದ ಶೇ 10ರಷ್ಟು ಶುಲ್ಕ ಹೆಚ್ಚಳಕ್ಕೆ ಬದಲಾಗಿ, ಶೇ 7ರಷ್ಟು ಹೆಚ್ಚಳ ಮಾಡಲು ಸಮ್ಮತಿ ಸೂಚಿಸಿದ್ದಾರೆ.

ADVERTISEMENT

2022-23ರ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳ ಸರ್ಕಾರಿ ಕೋಟಾದ ವಿದ್ಯಾರ್ಥಿಗಳ ಶುಲ್ಕ ₹38,200 ಇತ್ತು. ಅಲ್ಪಸಂಖ್ಯಾತರ ಕಾಲೇಜುಗಳಲ್ಲಿ (ಟೈಪ್-1) ₹91,796, ಅನುದಾನರಹಿತ ಕಾಲೇಜುಗಳಲ್ಲಿ (ಟೈಪ್-2) ₹98,984 ಮತ್ತು ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ₹91,796 ಇತ್ತು. ಪ್ರಸಕ್ತ ಸಾಲಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು  ಹಿಂದಿನ ಮೊತ್ತಕ್ಕೆ ಶೇ 7ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.