ADVERTISEMENT

ಸಿಇ, ಇಐಸಿ ಹಂಚಿಕೆ ಮತ್ತಷ್ಟು ಕಗ್ಗಂಟು

ಮಂಜೂರಾತಿಯ ನಾಲ್ಕು ಪಟ್ಟು ಅಧಿಕಾರಿಗಳು ಪಿಡಬ್ಲ್ಯುಡಿಯಲ್ಲಿ

ವಿ.ಎಸ್.ಸುಬ್ರಹ್ಮಣ್ಯ
Published 26 ಮಾರ್ಚ್ 2022, 19:31 IST
Last Updated 26 ಮಾರ್ಚ್ 2022, 19:31 IST
   

ಬೆಂಗಳೂರು: 13 ಮಂಜೂರಾದ ಹುದ್ದೆಗಳಿರುವ ಲೋಕೋಪಯೋಗಿ ಇಲಾಖೆಗೆ 53 ಮಂದಿ ಮುಖ್ಯ ಎಂಜಿನಿಯರ್‌ (ಸಿಇ), ಪ್ರಧಾನ ಎಂಜಿನಿಯರ್‌ಗಳು (ಐಇಸಿ). 39 ಹುದ್ದೆಗಳ ಮಂಜೂರಾತಿ ಇರುವ ಜಲ ಸಂಪನ್ಮೂಲ ಇಲಾಖೆಗೆ ಕೇವಲ 15 ಮುಖ್ಯ ಎಂಜಿನಿಯರ್‌ ಮತ್ತು ಪ್ರಧಾನ ಎಂಜಿನಿಯರ್‌ಗಳು!

ಇದು ಎಂಜಿನಿಯರ್‌ ಗಳ ಸೇವೆಯನ್ನು ವಿವಿಧ ಇಲಾಖೆಗಳಲ್ಲಿ ವರ್ಗೀಕರಿಸಿಶಾಶ್ವತವಾಗಿ ವಿಲೀನಗೊಳಿಸಲು ನಡೆಸಿದ ‘ಸಹಮತ’ ಪ್ರಕ್ರಿಯೆ ಸೃಷ್ಟಿಸಿರುವ ಅಸಮತೋಲನ. ಯಾವ ಇಲಾಖೆಯನ್ನೂ ಆಯ್ಕೆ ಮಾಡಿಕೊಳ್ಳದ 32 ಮುಖ್ಯ ಎಂಜಿನಿಯರ್‌ ಮತ್ತು ಪ್ರಧಾನ ಎಂಜಿನಿಯರ್‌ಗಳ ಸೇವೆಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿದ್ದು, ಹಿರಿಯ ಅಧಿಕಾರಿಗಳ ಸೇವಾ ವಿಷಯದ ನಿರ್ವಹಣೆ ಕಗ್ಗಂಟಾಗಿ ಪರಿಣಮಿಸಿದೆ.

ಮುಖ್ಯ ಎಂಜಿನಿಯರ್‌ ಮತ್ತು ಪ್ರಧಾನ ಎಂಜಿನಿಯರ್‌ಗಳ ಸೇವಾ ವಿಲೀನಕ್ಕೆ ನಡೆಸಿದ ‘ಸಹಮತ’ ಪ್ರಕ್ರಿಯೆಯಲ್ಲಿ 21 ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ಮತ್ತು 15 ಅಧಿಕಾರಿಗಳು ಜಲ ಸಂಪನ್ಮೂಲ ಇಲಾಖೆಯನ್ನು ಆಯ್ದುಕೊಂಡಿದ್ದರು. ಈ ಹಂತದಲ್ಲೇ ಅಸಮತೋಲನ ಸೃಷ್ಟಿಯಾಗಿತ್ತು. ತಟಸ್ಥವಾಗಿ ಉಳಿದವರನ್ನೂ ಲೋಕೋಪ ಯೋಗಿ ಇಲಾಖೆಗೆ ಕಳುಹಿಸಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಸಹಮತ’ ಪಡೆಯುವಾಗಲೇ ಲೋಪ: ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗ ಳಲ್ಲಿ ತಲಾ ಮೂರು ಹುದ್ದೆಗಳಿದ್ದರೂ ಸಹಮತ ಕೇಳಿಲ್ಲ. ಹೀಗಾಗಿ ಈ ಎರಡೂ ಇಲಾಖೆಗಳನ್ನು ಯಾರೊಬ್ಬರೂ ಆಯ್ಕೆ ಮಾಡಿಕೊಂಡಿಲ್ಲ.

ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ ಹಾಗೂಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಲ್ಲಿ ಒಟ್ಟು 51 ಮುಖ್ಯಎಂಜಿನಿಯರ್‌ ಮತ್ತು ಪ್ರಧಾನ ಎಂಜಿನಿಯರ್‌ ಹುದ್ದೆಗಳಿಗೆ ಮಂಜೂರಾತಿ ಇದೆ. ಆದರೆ, ಇತರ ಇಲಾಖೆಗಳಲ್ಲಿ ನಿಯೋಜನೆ ಮೇಲೆ ವರ್ಗಾವಣೆ ಮಾಡಬಹುದಾದ ಹುದ್ದೆಗಳನ್ನೂ ಗಣನೆಗೆ ತೆಗೆದುಕೊಂಡು 70 ಅಧಿಕಾರಿಗಳಿಗೆ ಈ ಶ್ರೇಣಿಗೆ ಬಡ್ತಿ ನೀಡಲಾಗಿತ್ತು.

‘ಸಹಮತ ಪಡೆಯುವಾಗ ಒಂದೇ ಇಲಾಖೆಯನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿತ್ತು. ಮಂಜೂರಾದ ಮೂಲ ಹುದ್ದೆಗಳು ಮತ್ತು ಹೆಚ್ಚುವರಿಯಾಗಿ ಬಡ್ತಿ ನೀಡಿದ ಹುದ್ದೆಗಳನ್ನು ವಿಂಗಡಿಸುವ ಕೆಲಸವೂ ಆಗಿಲ್ಲ. ವಿವಿಧ ಇಲಾಖೆಗಳ ನಡುವೆ ಆದ್ಯತೆಗಳನ್ನು ದಾಖಲಿಸುವುದಕ್ಕೂ ಅವಕಾಶ ನೀಡಿರಲಿಲ್ಲ. ಈ ಎಲ್ಲ ಲೋಪಗಳಿಂದಾಗಿ ಸಮಸ್ಯೆ ಜಟಿಲವಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

ಬಿಕ್ಕಟ್ಟಿನ ಮಧ್ಯೆಯೇ ಬಡ್ತಿ?: ಮುಖ್ಯ ಎಂಜಿನಿಯರ್‌ ಮತ್ತು ಪ್ರಧಾನ ಎಂಜಿನಿಯರ್‌ಗಳ ಹಂಚಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಹೆಚ್ಚುವರಿಯಾಗಿ ಲೋಕೋಪಯೋಗಿ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ವಿವಿಧ ಇಲಾಖೆಗೆ ಹಂಚಿಕೆ ಮಾಡಲು ಪುನಃ ಕ್ರಮಬದ್ಧವಾಗಿ ‘ಸಹಮತ’ ಪಡೆದು ಪ್ರಕ್ರಿಯೆ ಅಂತಿಮಗೊಳಿಸುವಂತೆ ಹಲವು ಅಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಮಧ್ಯದಲ್ಲೇ ಕಡಿಮೆ ಅಧಿಕಾರಿಗಳು ‘ಸಹಮತ’ ನೀಡಿರುವುದರ ಆಧಾರದಲ್ಲಿ ಮುಖ್ಯ ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ ಎಂದು ಪರಿಗಣಿಸಿ 19 ಮಂದಿ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳಿಗೆ ಬಡ್ತಿ ನೀಡಲು ಜಲ ಸಂಪನ್ಮೂಲ ಇಲಾಖೆಯಲ್ಲಿ ಸಿದ್ಧತೆ ನಡೆದಿದೆ. ಇಲಾಖಾ ಬಡ್ತಿ ಸಮಿತಿ ಸಭೆ ನಿಗದಿಗೆ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಮಜೂರಾತಿ ಇಲ್ಲದ ಮುಖ್ಯ ಎಂಜಿನಿಯರ್‌ ಮತ್ತು ಪ್ರಧಾನ ಎಂಜಿನಿಯರ್‌ ಹುದ್ದೆಗಳ ಸಂಖ್ಯೆ 33ಕ್ಕೆ ಏರಿಕೆಯಾಗಲಿದೆ.

ಸೇವಾ ವಿಸ್ತರಣೆಯಿಂದಲೂ ಸಮಸ್ಯೆ‌
ಮಂಜೂರಾದ ಹುದ್ದೆಗಳಿಗಿಂತ ಹೆಚ್ಚು ಮಂದಿ ಮುಖ್ಯ ಎಂಜಿನಿಯರ್‌ ಮತ್ತು ಪ್ರಧಾನ ಎಂಜಿನಿಯರ್‌ಗಳು ಇರುವಾಗಲೂ ಈ ಹುದ್ದೆಗಳಿಂದ ನಿವೃತ್ತರಾಗುತ್ತಿರುವ ಕೆಲವರನ್ನು ಸೇವೆಯಲ್ಲಿ ಮುಂದುವರಿಸಿ ಆದೇಶ ಹೊರಡಿಸಲಾಗಿದೆ.

ನಿವೃತ್ತರಾಗಿದ್ದ ಎನ್‌.ಜಿ. ಗೌಡಯ್ಯ ಮತ್ತು ಪ್ರಸನ್ನಕುಮಾರ್‌ ಅವರನ್ನು ಹುದ್ದೆಯಲ್ಲಿ ಮುಂದುವರಿಸಲಾಗಿದೆ. ನಿವೃತ್ತಿಯ ಅಂಚಿನಲ್ಲಿರುವ ಬಿ. ಗುರುಪ್ರಸಾದ್‌ ಮತ್ತು ಕೆ. ಜೈಪ್ರಕಾಶ್‌ ಅವರನ್ನೂ ಸೇವೆಯಲ್ಲಿ ಮುಂದುವರಿಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

*
ಮುಖ್ಯ ಎಂಜಿನಿಯರ್‌ ಮತ್ತು ಪ್ರಧಾನ ಎಂಜಿನಿಯರ್‌ಗಳ ಇಲಾಖಾವಾರು ಹಂಚಿಕೆಯಲ್ಲಿನ ಅಸಮತೋಲನ ಕುರಿತು ಪರಿಶೀಲನೆ ನಡೆಸಲಾಗುವುದು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ.
-ಪಿ. ರವಿಕುಮಾರ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.