ADVERTISEMENT

95 ಸಾವಿರ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕೌಶಲ ಕಲಿಕೆ: ಸಚಿವ ಡಾ.ಎಂ.ಸಿ.ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 15:48 IST
Last Updated 20 ಜನವರಿ 2026, 15:48 IST
ಡಾ.ಎಂ.ಸಿ.ಸುಧಾಕರ್
ಡಾ.ಎಂ.ಸಿ.ಸುಧಾಕರ್   

ಬೆಂಗಳೂರು: ಬ್ರಿಟಿಷ್‌ ಕೌನ್ಸಿಲ್, ಮೈಕ್ರೋಸಾಫ್ಟ್‌ ಸಹಯೋಗದಲ್ಲಿ 31 ಸರ್ಕಾರಿ ಪದವಿ, 29 ಪಾಲಿಟೆಕ್ನಿಕ್‌ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕೌಶಲ ಕಲಿಕೆ ಆರಂಭಿಸಲಾಗುತ್ತಿದ್ದು, 95,000 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ.

ಈ ಕುರಿತು ಮಂಗಳವಾರ ಒಪ್ಪಂದ ಮಾಡಿಕೊಂಡ ನಂತರ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ‘ಈಗಾಗಲೇ 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಂಪನ್ಮೂಲಗಳು, ಡಿಜಿಟಲ್‌ ಸಾಧನಗಳು ಮತ್ತು ‘ಇಂಗ್ಲಿಷ್‌ ತರಬೇತಿ ಕ್ಲಬ್‌ಗಳ’ ಮೂಲಕ ಇಂಗ್ಲಿಷ್ ಅಭ್ಯಾಸದ ಅವಕಾಶಗಳು ಲಭ್ಯವಾಗಲಿವೆ. ದೇಶ–ವಿದೇಶಗಳಲ್ಲಿ ಉದ್ಯೋಗ ಪಡೆಯುವ ಅರ್ಹತೆ ಹೆಚ್ಚಾಗಲಿದೆ’ ಎಂದರು. 

‘ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಇರುವಾಗ ಇಂಗ್ಲಿಷ್‌ನಲ್ಲಿ ಮಾತನಾಡಬೇಕು. ಅಧ್ಯಾಪಕರೂ ಪರಸ್ಪರ ಸಂವಹನ ನಡೆಸಬೇಕು. ಉನ್ನತ ಶಿಕ್ಷಣದಲ್ಲಿ ಬೋಧನೆಯ ಮಾಧ್ಯಮ ಇಂಗ್ಲಿಷ್‌ ಆಗಿದ್ದರೂ ಹೆಚ್ಚಿನವರು ಇಂಗ್ಲಿಷ್ ಮಾತನಾಡುವುದಿಲ್ಲ. ಕಾಲೇಜಿನ ಒಳಗೆ ಇದ್ದಾಗ ಇಂಗ್ಲಿಷ್‌ ಮಾತನಾಡಬೇಕು. ಮನೆಗೆ ಹೋದಾಗ ಪೋಷಕರೊಂದಿಗೆ ತಮ್ಮ ಮಾತೃಭಾಷೆಯಲ್ಲೇ ಮಾತನಾಡಬಹುದು’ ಎಂದು ಹೇಳಿದರು.

ADVERTISEMENT