ADVERTISEMENT

ಬೆಲೆಏರಿಕೆ ವಿರುದ್ಧ ಜೆಡಿಎಸ್‌ನ ‘ಸಾಕಪ್ಪಾ ಸಾಕು ಕಾಂಗ್ರೆಸ್‌ ಸರ್ಕಾರ’ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:45 IST
Last Updated 12 ಏಪ್ರಿಲ್ 2025, 15:45 IST
<div class="paragraphs"><p>ವಿಧಾನಸೌಧ ಮುತ್ತಿಗೆಗೆ ಮುಂದಾದ ನಿಖಿಲ್‌ ಕುಮಾರಸ್ವಾಮಿ ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು </p></div>

ವಿಧಾನಸೌಧ ಮುತ್ತಿಗೆಗೆ ಮುಂದಾದ ನಿಖಿಲ್‌ ಕುಮಾರಸ್ವಾಮಿ ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ₹2,000 ನೀಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಪ್ರತಿ ಕುಟುಂಬದಿಂದ ಹತ್ತಾರು ಸಾವಿರ ರೂಪಾಯಿ ವಸೂಲಿ ಮಾಡುತ್ತಿದೆ. ಗ್ಯಾರಂಟಿ ವೆಚ್ಚವನ್ನು ಭರಿಸಿಕೊಳ್ಳಲು ಬೆಲೆ ಏರಿಕೆ ಮಾಡಿ ಜನರನ್ನು ಲೂಟಿ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ದೂರಿದರು.

ADVERTISEMENT

ಬೆಲೆ ಏರಿಕೆ ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜೆಡಿಎಸ್‌ ಆಯೋಜಿಸಿದ್ದ, ‘ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ’ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಸಿದ್ದರಾಮಯ್ಯ ಅವರು 16 ಬಜೆಟ್‌ ಮಂಡಿಸಿದ್ದಾರೆ. ಆದರೆ, ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ’ ಎಂದರು.

‘ಬೆಲೆ ಏರಿಕೆಗೆ ಒಂದು ಮಿತಿ ಬೇಡವೇ? ಕೆಂಪೇಗೌಡರು ದೂರದೃಷ್ಟಿಯಿಂದ ಕಟ್ಟಿದ್ದ ಈ ನಗರವನ್ನು ಸುಲಿಗೆಗೆ ಕೇಂದ್ರ ಸ್ಥಾನ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಹೆಸರು ಹೇಳಿಕೊಂಡು ಬಂದ ಇವರು, ಈಗ ಜನರನ್ನು ಕಿತ್ತು ತಿನ್ನುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಅಂದರೆ, ಜನರನ್ನು ಕಿತ್ತು ತಿನ್ನುವುದಾ’ ಎಂದು ಪ್ರಶ್ನಿಸಿದರು.

‘ನಾನು ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ₹25,000 ಕೋಟಿ ಸಾಲ ಮನ್ನಾ ಮಾಡಿದ್ದೆ. ಆದರೆ, ಜನರ ಮೇಲೆ ತೆರಿಗೆ ಬರೆ ಹಾಕಿರಲಿಲ್ಲ. ಉಪ ಚುನಾವಣೆ ಬಂದಾಗ ಗೃಹಲಕ್ಷ್ಮಿ ಹಣ ನೀಡಿದರು. ಈಗ ಆ ಹಣ ಬರುತ್ತಿಲ್ಲ. ಪುಕ್ಕಟೆ ವಿದ್ಯುತ್ ಎಂದರು. ಈಗ ಅದರ ದರ ವಿಪರೀತ ಏರಿಕೆ ಮಾಡಿದ್ದಾರೆ’ ಎಂದರು.

‘ಭ್ರಷ್ಟಾಚಾರ ಮತ್ತು ಅಕ್ರಮವನ್ನು ಕಿತ್ತೊಗೆದರೆ ರಾಜ್ಯದ ಆಡಳಿತಕ್ಕೆ ಅತ್ಯವಿರುವ ಮತ್ತು ಗ್ಯಾರಂಟಿಗೆ ಬೇಕಾಗಿರುವ ಎಲ್ಲ ಹಣ ಸಿಗುತ್ತದೆ. ತಪ್ಪಿತಸ್ಥರಿಂದ ಅದನ್ನು ವಸೂಲಿ ಮಾಡುವ ಧೈರ್ಯ ಸರ್ಕಾರಕ್ಕೆ ಇರಬೇಕು. ಆಗ ಸಾಲ ಮಾಡುವ ಪ್ರಮೇಯವೇ ಬರುವುದಿಲ್ಲ’ ಎಂದರು.

ವಿಧಾನಸೌಧ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಭಾಗಿಯಾಗಿದ್ದರು –ಪ್ರಜಾವಾಣಿ ಚಿತ್ರ
ಗ್ಯಾರಂಟಿ ಪಡೆದುಕೊಂಡ ಪಾಪಕ್ಕಾಗಿ ಜನರು ದಿನವೂ ಬೆಲೆ ತೆರುತ್ತಿದ್ದಾರೆ. ಈ ಸರ್ಕಾರ ಕೊಟ್ಟಿದ್ದು ಅಲ್ಪ ವಸೂಲಿ ಮಾಡುತ್ತಿರುವುದು ಬೆಟ್ಟದಷ್ಟು
ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ
ನನ್ನ ಕ್ಷೇತ್ರಕ್ಕೆ ಅನುದಾನ ಪಾಲಿಟೆಕ್ನಿಕ್‌ ಕಾಲೇಜು ಕೇಳಿದರೆ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಾ ಅಂತಾರೆ. ಅವರ ಶಾಸಕರಿಗೇ ಅನುದಾನ ಸಿಕ್ಕಿಲ್ಲ
ಎಂ.ಟಿ.ಕೃಷ್ಣಪ್ಪ ತುರುವೇಕೆರೆ ಶಾಸಕ

ವಿಧಾನಸೌಧ ಮುತ್ತಿಗೆಗೆ ಯತ್ನ

ಸ್ವಾತಂತ್ರ್ಯ ಉದ್ಯಾನದ ಹೊರ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಜೆಡಿಎಸ್‌ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ‘ಸಾಕಪ್ಪಾ ಸಾಕು ಕಾಂಗ್ರೆಸ್‌ ಸರ್ಕಾರ ಬಿಟ್ಟಿ ಭಾಗ್ಯ ಯಾರಿಗೂ ಬೇಡಪ್ಪಾ’ ಎಂದು ಘೋಷಣೆ ಕೂಗಿದರು.   ಪ್ರತಿಭಟನಾ ಸಮಾವೇಶದ ನಂತರ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಶಾಸಕರು ಪದಾಧಿಕಾರಿಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮೆರವಣಿಗೆ ಹೊರಟರು. ರಸ್ತೆ ಮಧ್ಯೆಯೇ ಅವರನ್ನು ಪೊಲೀಸರು ತಡೆದರು. ತಡೆಗಳನ್ನು ಹತ್ತಿ ಮುತ್ತಿಗೆಗೆ ಮುಂದಾದ ನಿಖಿಲ್‌ ಸೇರಿ 49ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು.  ಸಮಾವೇಶದಲ್ಲಿ ಭಾಗಿಯಾಗಲು ರಾಜ್ಯದ ವಿವಿಧೆಡೆಯಿಂದ ಸುಮಾರು 50 ಬಸ್‌ಗಳಲ್ಲಿ ಜೆಡಿಎಸ್‌ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನಕ್ಕೆ ಬಂದಿದ್ದರು. ಶೇಷಾದ್ರಿ ರಸ್ತೆ ಕಾಳಿದಾಸ ರಸ್ತೆ ಅರಮನೆ ರಸ್ತೆಗಳಲ್ಲಿ ಆ ಬಸ್‌ಗಳನ್ನು ನಿಲ್ಲಿಸಿದ್ದ ಕಾರಣ ಅಲ್ಲೆಲ್ಲಾ ಸಂಚಾರ ದಟ್ಟಣೆ ಉಂಟಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.