
ಬೆಂಗಳೂರು: ಎಚ್‌ಎಂಟಿ ವಶದಲ್ಲಿರುವ ಜಮೀನು ಅರಣ್ಯವೇ ಆಗಿರಲಿ, ಬ್ರಿಟಿಷರ ಕಾಲದಲ್ಲಿ ನೀಡಲಾಗಿರುವ ಗುತ್ತಿಗೆಯೇ ಆಗಿರಲಿ ಅದನ್ನು ಉಳಿಸಿಕೊಳ್ಳಲು ಶ್ರಮಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖೆ ಅಧಿಕಾರಿಗಳ ಜತೆ ಗುರುವಾರ ಸಭೆ ನಡೆಸಿದ ಅವರು, ‘ಈ ಜಮೀನಿನ ಮೌಲ್ಯ ಸುಮಾರು ₹50 ಸಾವಿರ ಕೋಟಿಗೂ ಹೆಚ್ಚು ಇದೆ. ಈ ಅರಣ್ಯ ಭೂಮಿಯ ವಿವಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿದ್ದು ಬೆನ್ನು ಹತ್ತಿ ಮರಳಿ ಪಡೆಯಬೇಕು ಎಂದು ಸೂಚಿಸಿದರು.
‘ನಾನು ಸಚಿವನಾದ ಬಳಿಕ ಅರಣ್ಯ ಒತ್ತುವರಿ ತೆರವಿಗೆ ಹಾಗೂ ಪ್ರಕೃತಿ, ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದು, ನಿಮ್ಮೆಲ್ಲರ ಸಹಕಾರದಿಂದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ವೃಕ್ಷ ಸಂರಕ್ಷಣೆ, ಸಂವರ್ಧನೆ ಆಗುತ್ತಿದೆ’ ಎಂದು ಹೇಳಿದರು.
‘ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂಚೂಣಿ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದ ಅರಣ್ಯ ಇಲಾಖೆ ದೇಶಕ್ಕೇ ಮಾದರಿಯಾಗಿದೆ. ಕೊಡಗಿನಲ್ಲಿ ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದು ನೋವಿನ ಸಂಗತಿ. ಮಾನವ–ವನ್ಯಜೀವಿ ಸಂಘರ್ಷ ದೊಡ್ಡ ಸವಾಲಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ತಜ್ಞರ ಸಲಹೆ ಪಡೆದು ಎಲ್ಲರೂ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ.ರೇ, ಎಪಿಸಿಸಿಎಫ್ ಕುಮಾರ್ ಪುಷ್ಕರ್ ಮತ್ತು ಮನೋಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.