ADVERTISEMENT

ಆರೋಪ ಮುಕ್ತನಾದರೂ ಸಿಗದ ಸಚಿವ ಸ್ಥಾನ: ಕೆ.ಎಸ್.ಈಶ್ವರಪ್ಪ

ಪಕ್ಷದ ನಾಯಕರ ವಿರುದ್ಧ ಶಾಸಕ ಕೆ.ಎಸ್.ಈಶ್ವರಪ್ಪ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 13:12 IST
Last Updated 17 ಸೆಪ್ಟೆಂಬರ್ 2022, 13:12 IST
   

ಶಿವಮೊಗ್ಗ: ‘ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತನಾದರೆ ಮತ್ತೆ ಸಚಿವ ಸ್ಥಾನ ಕೊಡುವುದಾಗಿ ಪಕ್ಷದ ನಾಯಕರು ಹೇಳಿದ್ದರು. ಯಾಕೆ ಕೊಟ್ಟಿಲ್ಲ ಎಂದು ನೀವು (ಮಾಧ್ಯಮದವರು) ನನಗಲ್ಲ, ಅವರನ್ನೇ ಕೇಳಿ. ನಾನು ಇವತ್ತೇ ಮದುವೆ ಗಂಡು ಆಗಲು ತಯಾರಿದ್ದೇನೆ‘ ಎಂದು ಶನಿವಾರ ಇಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ತೀರ್ಮಾನ ಮಾಡಬೇಕಾದವರು ಪಕ್ಷದ ಹಿರಿಯರು. ಅವರು ಮಾಡಲಿಲ್ಲ ಅಂದರೆ ನಾನೇನು ಮಾಡಲು ಆಗುವುದಿಲ್ಲ. ಈ ವಿಚಾರಕ್ಕೆ ಯಾರನ್ನೂ ಭೇಟಿ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

‘ಬೇರೆ ಪ್ರಕರಣಕ್ಕೂ ಇದಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ. ನನ್ನ ಪ್ರಕರಣವೇ ಬೇರೆ. ನಮ್ಮ ಮನೆ ದೇವರು ಚೌಡೇಶ್ವರಿಯ ಕೃಪೆಯಿಂದ ನಾನು ಆರೋಪಮುಕ್ತನಾಗಿದ್ದರೂ ಇನ್ನೂ ಸಚಿವ ಸ್ಥಾನ ನೀಡದಿರುವುದು ಏಕೆ ಎಂಬುದು ಗೊತ್ತಿಲ್ಲ. ಇವತ್ತೇ ಬಂದು ಮಂತ್ರಿ ಆಗು ಅಂದರೆ ನಾನು ಸಿದ್ಧವಾಗಿದ್ದೇನೆ. ಆದರೆ, ಅದು ನನ್ನ ಕೈಯಲ್ಲಿಲ್ಲ‘ ಎಂದರು.

ADVERTISEMENT

‘ಈ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಸೇರಿ ಕೇಂದ್ರದ ನಾಯಕರೊಂದಿಗೆ ಕುಳಿತು ಚರ್ಚೆ ಮಾತನಾಡಿ ತೀರ್ಮಾನ ಕೈಗೊಳ್ಳಬೇಕಿದೆ. ಆದರೆ ಅವರು ಏಕೆ ಅದಕ್ಕೆ ಹಿಂದೆ–ಮುಂದೆ ನೋಡುತ್ತಿದ್ದಾರೊ ಗೊತ್ತಿಲ್ಲ. ಎಷ್ಟು ಖಾತೆ ಖಾಲಿ ಇದೆಯೋ ಅಷ್ಟನ್ನು ಭರ್ತಿ ಮಾಡಬೇಕಿದೆ. ಎಂಬುದು ನನ್ನ ಅಪೇಕ್ಷೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.