ADVERTISEMENT

ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹ 100 ಕೋಟಿ ಅನುದಾನ ಕೊಡಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 10:15 IST
Last Updated 3 ಡಿಸೆಂಬರ್ 2020, 10:15 IST
ಪಿ.ಆರ್.ರಮೇಶ್
ಪಿ.ಆರ್.ರಮೇಶ್   

ತುಮಕೂರು: ತಿಗಳ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, ಕನಿಷ್ಠ ₹ 100 ಕೋಟಿ ಅನುದಾನ ನೀಡಬೇಕು ಎಂದು ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ‌

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, ‘ತಿಗಳ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಿತದ ಕಾರಣದಿಂದ ಪ್ರವರ್ಗ ‘2ಎ’ ಬದಲಾಗಿ ಪ್ರವರ್ಗ-1ರ ಅಡಿ ಮೀಸಲಾತಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಮುದಾಯದ ಪ್ರಗತಿಗಾಗಿ ₹ 80 ಕೋಟಿ ಅನುದಾನ ನೀಡಿದ್ದರು. ಆದರೆ ನಂತರ ಬಂದ ಸರ್ಕಾರಗಳು ಸಮುದಾಯದ ಪ್ರಗತಿಗಾಗಿ ಯಾವುದೇ ಅನುದಾನ ನೀಡಲಿಲ್ಲ ಎಂದು ದೂರಿದರು.

ADVERTISEMENT

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಸಂವಿಧಾನ ಬಾಹಿರವಾಗಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇಲ್ಲದ ಸಮುದಾಯಕ್ಕೆ ನಿಗಮ ರಚಿಸಿರುವುದಕ್ಕೆ ಮಾನ್ಯತೆ ಇಲ್ಲ. ಜನರ ಕಣ್ಣೊರೆಸಲು ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.

ತಿಗಳ ಮಹಾಸಭಾ ಅಧ್ಯಕ್ಷ ಎಚ್.ಸುಬ್ಬಣ್ಣ ಮಾತನಾಡಿ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇಲ್ಲದ ಜಾತಿಗೆ ಇಲಾಖೆಯಿಂದ ಅನುದಾನ ನೀಡಿರುವುದು ಸಂವಿಧಾನ ಬಾಹಿರ. ಸರ್ಕಾರ ಮೊದಲು ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಿ. ನಂತರ ಅನುದಾನ ನೀಡಲಿ ಎಂದರು.

ರಾಜ್ಯದಲ್ಲಿ ತಿಗಳ ಸಮುದಾಯದ 40 ಲಕ್ಷ ಜನರು ಇದ್ದಾರೆ. ಆದರೆ ಶಾಸಕರು, ಸಂಸದರು ಮಾತ್ರ ಇಲ್ಲ. ನಮ್ಮ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದೆ. ಶೇ 2 ರಷ್ಟು ಮಾತ್ರ ವಿದ್ಯಾವಂತರು ಇದ್ದಾರೆ ಎಂದು ಹೇಳಿದರು.

ಸಮುದಾಯದ ಯುವ ಪೀಳಿಗೆಯ ವಿದ್ಯಾಭ್ಯಾಸದ ದೃಷ್ಟಿಯಿಂದ ನಿಗಮ ರಚನೆ ಅವಶ್ಯಕ. ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ನಿಗಮ ರಚನೆ ಮಾಡುವಂತೆ ಮನವಿ ಮಾಡಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತುಮಕೂರಿನ ತಿಗಳ ವಿದ್ಯಾಭಿವೃದ್ಧಿ ಸಂಘದ ವಿದ್ಯಾರ್ಥಿನಿಲಯದ ಊಟದ ಮನೆ ಮತ್ತು ಸಭಾಂಗಣದ ಕಾಮಗಾರಿ ಅಪೂರ್ಣವಾಗಿದೆ. ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ₹ 50 ಲಕ್ಷ ‌ಹೆಚ್ಚುವರಿ ಅನುದಾನವನ್ನು ಸರ್ಕಾರ ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ತಿಗಳ ಸಮುದಾಯದ ಮುಖಂಡರಾದ ಎ.ಎಚ್. ಬಸವರಾಜು, ಕೃಷ್ಣಮೂರ್ತಿ, ರೇವಣ್ಣಸಿದ್ದಯ್ಯ, ನಾಗರಾಜಯ್ಯ, ಹನುಮದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.