ಅಡಿಕೆ
ನವದೆಹಲಿ: ಅಡಿಕೆ ಕೃಷಿ ಪ್ರದೇಶ ವಿಸ್ತರಣೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪಿಸಬೇಕೆಂಬ ಬೇಡಿಕೆಯ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರವನ್ನೇ ನೀಡಿಲ್ಲ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವರಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ರಾಜ್ಯ ಸಚಿವ ಜಿತಿನ ಪ್ರಸಾದ ಉತ್ತರ ನೀಡಿ, ಅಡಿಕೆ ಬೆಳೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ವಿವರ ನೀಡಿದ್ದಾರೆ. ಆದರೆ, ಮಂಡಳಿ ಸ್ಥಾಪನೆ ಬೇಡಿಕೆ ಕುರಿತು ಉತ್ತರಿಸಿಲ್ಲ.
2024–25ನೇ ಸಾಲಿನಲ್ಲಿ ಅಡಿಕೆ ಎಲೆ ಚುಕ್ಕೆ ರೋಗ ನಿರ್ವಹಣೆಗೆ ಕೇಂದ್ರ ಕೃಷಿ ಸಚಿವಾಲಯವು ರಾಜ್ಯಕ್ಕೆ ₹37 ಕೋಟಿ ಬಿಡುಗಡೆ ಮಾಡಿದೆ. ಹವಾಮಾನ ಬೆಳೆ ಆಧಾರಿತ ವಿಮಾ ಯೋಜನೆ ಅಡಿಯಲ್ಲಿ ಅಡಿಕೆ ಬೆಳೆಯನ್ನು ಸೇರಿಸಲಾಗಿದೆ ಎಂದರು.
ಕುಮಾರ ನಾಯಕ, ‘ರಾಜ್ಯದಲ್ಲಿ 10 ಜಿಲ್ಲೆಗಳಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವಾರ್ಷಿಕ 11 ಲಕ್ಷ ಟನ್‌ನಷ್ಟು ಅಡಿಕೆ ಉತ್ಪಾದನೆಯಾಗುತ್ತಿದೆ. ಎಲೆ ಚುಕ್ಕಿ ರೋಗ, ಹಳದಿ ರೋಗ ಮತ್ತಿತರ ಸಮಸ್ಯೆಗಳಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅಡಿಕೆಗೆ ವೈಜ್ಞಾನಿಕ ಬೆಲೆ ನಿಗದಿ, ರೋಗ ನಿಯಂತ್ರಣ, ನಷ್ಟ ಪರಿಹಾರ ನೀಡಲು ಹಾಗೂ ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಬರಲು ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.