ADVERTISEMENT

ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 20:30 IST
Last Updated 7 ಜನವರಿ 2025, 20:30 IST
ಅಶ್ವಿನಿ ವೈಷ್ಣವ್ ಅವರಿಗೆ ಎಚ್‌.ಡಿ.ಕುಮಾರಸ್ವಾಮಿ ಹೂಗುಚ್ಛ ನೀಡಿದರು. ಜೆಡಿಎಸ್‌ ಮುಖಂಡರಾದ ಸಾ.ರಾ.ಮಹೇಶ್‌, ಬಂಡೆಪ್ಪ ಕಾಶೆಂಪೂರ ಇದ್ದಾರೆ 
ಅಶ್ವಿನಿ ವೈಷ್ಣವ್ ಅವರಿಗೆ ಎಚ್‌.ಡಿ.ಕುಮಾರಸ್ವಾಮಿ ಹೂಗುಚ್ಛ ನೀಡಿದರು. ಜೆಡಿಎಸ್‌ ಮುಖಂಡರಾದ ಸಾ.ರಾ.ಮಹೇಶ್‌, ಬಂಡೆಪ್ಪ ಕಾಶೆಂಪೂರ ಇದ್ದಾರೆ    

ನವದೆಹಲಿ: ಮೈಸೂರಿನ ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಕೇಂದ್ರ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರ ಮನವಿಗೆ ಪ್ರತಿಕ್ರಿಯಿಸಿದ ಅವರು, ‘ಇದು ಅತ್ಯಂತ ಮಹತ್ವದ ಪ್ರಸ್ತಾವನೆ. ಈ ಬಗ್ಗೆ ಖುದ್ದು ಗಮನ ಹರಿಸುತ್ತೇನೆ’ ಎಂದರು. 

ರೈಲ್ವೆ ಸುರಕ್ಷತೆಗೆ ಮೈಸೂರು ಭಾಗದಲ್ಲಿ ಹೆಚ್ಚು ಆದ್ಯತೆ ಕೊಡಬೇಕಿದೆ ಹಾಗೂ ಈ ಭಾಗದಲ್ಲಿ ಪ್ರಯಾಣಿಕರ ದಟ್ಟಣಿಯು ಹೆಚ್ಚಾಗಿದ್ದು, ಒಟ್ಟಾರೆ ರೈಲ್ವೆ ಸುರಕ್ಷತೆಯು ಮಹತ್ವದ ಅಂಶವಾಗಿದೆ ಎಂದು ಕುಮಾರಸ್ವಾಮಿ ಅವರು ಸಚಿವರಿಗೆ ಮನವಿ ಮಾಡಿಕೊಟ್ಟರು.

ADVERTISEMENT

ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಕೆ.ಆರ್.ನಗರದಲ್ಲಿದ್ದ ಹಳೆಯ ರೈಲು ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಹಳೆಯ ನಿಲ್ದಾಣದ ಜಾಗ ಹಾಗೆಯೇ ಖಾಲಿ ಉಳಿದಿದ್ದು, ಭೂಸ್ವಾಧೀನದ ಸಮಸ್ಯೆ ಇಲ್ಲ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು.

ಇದಲ್ಲದೆ, ರಾಜ್ಯದಲ್ಲಿ ಬಾಕಿ ಇರುವ ವಿವಿಧ ರೇಲ್ವೆ ಯೋಜನೆಗಳನ್ನು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸುವ ಬಗ್ಗೆ ಕುಮಾರಸ್ವಾಮಿ ಅವರು ಸಚಿವರ ಜತೆ ಚರ್ಚಿಸಿದರು.

ಮನವಿ:

*ಚನ್ನಪಟ್ಟಣ - ಬೆಂಗಳೂರು - ಮೈಸೂರು ವಿಭಾಗದಲ್ಲಿ ಪ್ರಮುಖವಾದ ಎಲ್ಲ ರೈಲುಗಳ ನಿಲುಗಡೆ.

*ಹಾಸನ, ಮಂಗಳೂರು ಒಳಗೊಂಡ ಮುಂಬೈ - ಬೆಂಗಳೂರು - ಮುಂಬೈ ಮಾರ್ಗದಲ್ಲಿ ಹೊಸ ರೈಲು ಮಂಜೂರು.

*ಮದ್ದೂರು ಮತ್ತು ಮಂಡ್ಯದಲ್ಲಿ ಬೆಂಗಳೂರು - ಮಂಗಳೂರು - ಮುರುಡೇಶ್ವರ ನಡುವೆ ಸಂಚರಿಸುವ 16585 ರೈಲಿನ ನಿಲುಗಡೆ.

*ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗಗಳ ಮಂಜೂರಾತಿ.

*ಹೆಜ್ಜಾಲ- ಕನಕಪುರ - ಮಳವಳ್ಳಿ - ಕೊಳ್ಳೇಗಾಲ - ಯಳಂದೂರು - ಚಾಮರಾಜನಗರ ರೈಲು ಮಾರ್ಗಕ್ಕೆ ಶೀಘ್ರ ಅನುಮತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.