ಬೆಂಗಳೂರು: ಮಾರುಕಟ್ಟೆ ಶುಲ್ಕ ವಂಚಿಸುವ ಮೆಕ್ಕೆಜೋಳ, ಅಕ್ಕಿ ಆಧಾರಿತ ಎಥೆನಾಲ್ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿ ಕ್ರಿಮಿನಲ್ ಕೇಸು ದಾಖಲಿಸಿ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ವಿಕಾಸಸೌಧದಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ರಾಜ್ಯಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
ಮೆಕ್ಕೆಜೋಳ, ಭತ್ತ, ಅಡಿಕೆ, ಮೆಣಸಿನಕಾಯಿ, ಹತ್ತಿ ಬೆಳೆಗಳು ಎಪಿಎಂಸಿಯ ಆದಾಯದ ಪ್ರಮುಖ ಮೂಲಗಳು. ಕೆಲವು ಎಥೆನಾಲ್ ಕಂಪನಿಗಳು ಮತ್ತು ರೈಸ್‌ಮಿಲ್‌ಗಳ ಮಾಲೀಕರು ಮಾರುಕಟ್ಟೆ ಶುಲ್ಕ ವಂಚಿಸುತ್ತಿರುವ ಮಾಹಿತಿ ಇದೆ. ಆದ್ದರಿಂದ, ಅಂತಹವರ ಮೇಲೆ ಗಮನ ಇಡಬೇಕು ಎಂದು ಹೇಳಿದರು.
ಮಾರುಕಟ್ಟೆ ಸೆಸ್ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದಲೇ ನಾಲ್ಕು ವಿಭಾಗಗಳಲ್ಲಿ ವಿಚಕ್ಷಣಾ ದಳ ರಚನೆ ಮಾಡಿ ವಾಹನ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ, ಉದ್ದೇಶ ಸಫಲವಾಗಿಲ್ಲ. ಶುಲ್ಕ ವಂಚಿಸಿ ವಹಿವಾಟು ನಡೆಯುತ್ತಿರುವ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಅಧಿಕಾರಿಗಳ ಸಹಕಾರ ಇಲ್ಲದೆ ನಂ.2 ವ್ಯವಹಾರ ನಡೆಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಬೆಳಗಾವಿ, ಕಲಬುರಗಿ ಗಡಿಭಾಗಗಳಲ್ಲಿ ನಂ.2 ವ್ಯವಹಾರ ಹೆಚ್ಚಾಗಿದೆ. ನೆರೆಯ ರಾಜ್ಯಗಳ ಮಾರುಕಟ್ಟೆಗೆ ಉತ್ಪನ್ನಗಳು ಹೋಗುತ್ತಿವೆ. ವಾಣಿಜ್ಯ ತೆರಿಗೆ ಇಲಾಖೆ ಮತ್ತು ನಮ್ಮ ವಿಚಕ್ಷಣಾ ತಂಡದ ಕೆಲವರು ಸೇರಿಕೊಂಡು ಈ ಅಕ್ರಮಗಳಿಗೆ ಸಹಕಾರ ನೀಡುತ್ತಿರುವ ಮಾಹಿತಿ ಬಂದಿದೆ. ಇದನ್ನು ಎಚ್ಚರಿಕೆ ಎಂದು ತಿಳಿದು ಕರ್ತವ್ಯ ನಿರ್ವಹಿಸಿ’ ಎಂದು ಶಿವಾನಂದಪಾಟೀಲ ಹೇಳಿದರು.
ಕ್ಯಾಂಪ್ಕೊ ನಡೆಸುವ ಅಡಿಕೆ ವಹಿವಾಟಿನ ಪ್ರತಿಶತ 50 ರಷ್ಟು ಎಪಿಎಂಸಿಗಳಲ್ಲಿ ನಡೆಯುತ್ತಿಲ್ಲ. ಕ್ಯಾಂಪ್ಕೊ, ಮ್ಯಾಮ್ಕೋಸ್‌ಗಳ ವಹಿವಾಟು ಮತ್ತು ಎಪಿಎಂಸಿಗಳಲ್ಲಿ ಅಡಕೆ ವಹಿವಾಟು ಮಾಹಿತಿ ಸಂಗ್ರಹ ಮಾಡಿ, ಎಪಿಎಂಸಿಗಳಲ್ಲಿ ಕಡಿಮೆಯಾಗಲು ಏನು ಕಾರಣ ಎಂಬುದನ್ನು ಪತ್ತೆ ಮಾಡಬೇಕು ಎಂದು ಸೂಚನೆ ನೀಡಿದರು.
ಎಪಿಎಂಸಿಗಳ ಜಾಗವನ್ನು ಅನ್ಯ ಉದ್ದೇಶಗಳಿಗೆ ನೀಡಿರುವ ಪ್ರಕರಣಗಳನ್ನು ಪ್ರಸ್ತಾಪಿಸಿದ ಸಚಿವರು, ಯಾವುದೇ ಕಾರಣಕ್ಕೂ ಅನ್ಯ ಚಟುವಟಿಕೆಗಳಿಗೆ ಕೊಡಬಾರದು. ಆಸ್ತಿಗಳನ್ನು ರಕ್ಷಣೆ ಮಾಡಬೇಕು. ಅನೇಕ ಎಪಿಎಂಸಿಗಳಲ್ಲಿನ ಗೋದಾಮುಗಳು ಖಾಲಿ ಇವೆ ಎಂಬ ಕಾರಣಕ್ಕೆ ದರ ಪರಿಷ್ಕರಣೆ ಮಾಡಿದ್ದರೂ ಇನ್ನೂ ಹಂಚಿಕೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಎಪಿಎಂಸಿಗಳಲ್ಲಿ ದರ ಕುಸಿತವಾದಾಗ ಅಧಿಕಾರಿಗಳು ನಿರ್ದೇಶಕರ ಗಮನಕ್ಕೆ ತರಬೇಕು. ಅಂತಹ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಕಾರ್ಯದರ್ಶಿಗಳು ಮಾಹಿತಿ ನೀಡದಿದ್ದರೆ, ಸಮಸ್ಯೆಯಾಗಲಿದೆ ಎಂದರು.
ಸಭೆಯಲ್ಲಿ ಸಹಕಾರ ಇಲಾಖೆ ಕಾರ್ಯದರ್ಶಿ ಎಚ್.ವಿ.ಶೆಟ್ಟಣ್ಣವರ್, ನಿರ್ದೇಶಕ ಶಿವಾನಂದ ಕಾಪಸೆ ಹಾಜರಿದ್ದರು.
₹82 ಸಾವಿರ ಕೋಟಿ ವಹಿವಾಟು
₹498 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹ
ಬೆಂಬಲ ಬೆಲೆಯಲ್ಲಿ 16 ಕೃಷಿ ಉತ್ಪನ್ನಗಳ ಖರೀದಿ
ವರ್ತಕರ ಲೈಸೆನ್ಸ್ ರದ್ದುಪಡಿಸಿ
ಐದು ವರ್ಷ ವಹಿವಾಟು ಮಾಡದ ವರ್ತಕರ ಲೈಸೆನ್ಸ್ ರದ್ದುಪಡಿಸಿ ಎಂದು ಶಿವಾನಂದ ಪಾಟೀಲ ಅವರು ಸೂಚಿಸಿದರು. ವಿವಿಧ ಸೌಲಭ್ಯಗಳ ಕಾರಣದಿಂದ ಟ್ರೇಡ್ ಲೈಸೆನ್ಸ್ ಪಡೆದು ದುರ್ಬಳಕೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಟ್ರೇಡ್ ಲೈಸೆನ್ಸ್ ಉದ್ದೇಶವೇ ಬೇರೆ ಇರುತ್ತದೆ. ಅಂಥವರು ಯಾವುದೇ ವ್ಯಾಪಾರ– ವ್ಯವಹಾರ ಮಾಡುವುದಿಲ್ಲ. ಹೀಗಾಗಿ ಖರೀದಿ ಚಟುವಟಿಕೆ ಮಾಡದವರ ಲೈಸೆನ್ಸ್ ರದ್ದುಪಡಿಸಿ ಎಂದು ಹೇಳಿದರು. ಕೆಲವು ಎಪಿಎಂಸಿ ಕಾರ್ಯದರ್ಶಿಗಳು ಲೈಸೆನ್ಸ್ ನೀಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅದರ ಉದ್ದೇಶ ಅರ್ಥವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.