ಎತ್ತಿನಹೊಳೆ
ನವದೆಹಲಿ: ಬರಪೀಡಿತ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದ ಬಳಿಕ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ರಾಜ್ಯ ಸರ್ಕಾರವು 508 ಎಕರೆ ಜಾಗ ಗುರುತಿಸಿದೆ. ಕೇಂದ್ರ ಸರ್ಕಾರಕ್ಕೆ ವಿವರಣೆಯನ್ನೂ ನೀಡಿದೆ.
ಯೋಜನೆಯ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, ‘ಯೋಜನೆಯಿಂದಾಗಿ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿಗಳಿದ್ದು, ಈ ಬಗ್ಗೆ ವಾಸ್ತವಾಂಶ ಹಾಗೂ ಇಡೀ ಯೋಜನೆಯ ಕಾರ್ಯಸಾಧ್ಯತೆಯ ವರದಿ ಸಲ್ಲಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
‘ಅರಣ್ಯ ಬಳಕೆಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯ ವಿವರಗಳನ್ನು ಪರಿಶೀಲನೆ ನಡೆಸಿದಾಗ, ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಗುರುತಿಸಿರುವ ಜಾಗದಲ್ಲಿ ರಸ್ತೆ ಹಾದು ಹೋಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿವರಣೆ ನೀಡಬೇಕು ಹಾಗೂ ಪ್ರಮಾಣಪತ್ರ ಸಲ್ಲಿಸಬೇಕು. ಪರಿಹಾರಾತ್ಮಕ ಅರಣ್ಯಕ್ಕೆ ಗುರುತಿಸಿರುವ ಅರಣ್ಯೇತರ ಜಾಗವು ತೀರ್ಥರಾಮಪುರ ರಾಜ್ಯ ಅರಣ್ಯದ ವ್ಯಾಪ್ತಿಯಲ್ಲಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಪರಿಹಾರಾತ್ಮಕ ಅರಣ್ಯೀಕರಣದ ಸಮಗ್ರ ಯೋಜನೆಯನ್ನು ಕೂಡಲೇ ಸಲ್ಲಿಸಬೇಕು’ ಎಂದು ತಾಕೀತು ಮಾಡಿತ್ತು.
ಯೋಜನೆಯ ಎರಡನೇ ಹಂತದಲ್ಲಿ 252 ಕಿ.ಮೀ. ಉದ್ದದ ಮುಖ್ಯ ಗುರುತ್ವ ಕಾಲುವೆಯು ಹಾಸನ ಹಾಗೂ ತುಮಕೂರು ಜಿಲ್ಲೆಗಳ 508 ಎಕರೆ ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುತ್ತಿದೆ. ಈ ಅರಣ್ಯ ಬಳಕೆಗೆ ಅರಣ್ಯ ಸಚಿವಾಲಯದ ಒಪ್ಪಿಗೆ ಬೇಕಾಗಿದೆ. ಅರಣ್ಯ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ಪರಿಹಾರಾತ್ಮಕ ಅರಣ್ಯೀಕರಣಕ್ಕೂ ಜಾಗ ಗುರುತಿಸುವುದು ಕಡ್ಡಾಯ. ಆದರೆ, ಎತ್ತಿನಹೊಳೆ ಯೋಜನೆಯಲ್ಲಿ ರಾಜ್ಯವು ಲೋಪ ಎಸಗಿದ್ದನ್ನು ಕೇಂದ್ರ ಅರಣ್ಯ ಸಚಿವಾಲಯ ಗಂಭೀರವಾಗಿ ಪರಿಗಣಿಸಿತ್ತು. ಕಾಡು ಬೆಳೆಸಲು ಜಾಗ ಗುರುತಿಸಿರುವ ರಾಜ್ಯ ಸರ್ಕಾರವು, ಅಗತ್ಯ ವಿವರಗಳು ಹಾಗೂ ದಾಖಲೆಗಳನ್ನು ಪರಿವೇಶ್ ಪೋರ್ಟಲ್‌ನ ಅಪ್‌ಲೋಡ್ ಮಾಡಿದೆ.
ಅರಣ್ಯ ತೀರುವಳಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆ ಅನುಮತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಇತ್ಯಾದಿ ಅಡೆತಡೆಗಳನ್ನು ನಿವಾರಿಸಿಕೊಂಡು ಯೋಜನೆಯನ್ನು 2027ರ ಮಾರ್ಚ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.