ಎತ್ತಿನಹೊಳೆ ಯೋಜನೆ
ನವದೆಹಲಿ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ 432 ಎಕರೆ ಅರಣ್ಯ ಬಳಕೆಗೆ ತಾತ್ವಿಕ ಅನುಮೋದನೆ ನೀಡುವಂತೆ ಕೋರಿ ಕರ್ನಾಟಕ ಸರ್ಕಾರವು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಮತ್ತೆ ಪ್ರಸ್ತಾವ ಸಲ್ಲಿಸಿದೆ.
ಹಾಸನ, ತುಮಕೂರು ಜಿಲ್ಲೆಗಳಲ್ಲಿ ಗುರುತ್ವಾಕರ್ಷಣೆ ಕಾಲುವೆ ನಿರ್ಮಿಸಲು ತುಮಕೂರಿನ ಬೆಣ್ಣೆಹಳ್ಳದ ಕಾವಲ್, ಕಂಚಿಗಾನಹಳ್ಳಿ ಹಾಗೂ ಹಾಸನದ ಐದಹಳ್ಳಿ ಕಾವಲ್, ಕುಮರಿಹಳ್ಳಿ ಗ್ರಾಮದ ಅರಣ್ಯ ಭೂಮಿ ಬಳಸಲು ಒಪ್ಪಿಗೆ ಕೊಡಬೇಕು ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಅವರು ಅರಣ್ಯ ಸಚಿವಾಲಯದ ಕಾರ್ಯದರ್ಶಿಗೆ ಅಕ್ಟೋಬರ್ 8ರಂದು ಪ್ರಸ್ತಾವ ಸಲ್ಲಿಸಿದ್ದಾರೆ.
432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ಕೋರಿ ರಾಜ್ಯ ಸರ್ಕಾರ ಈ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂಬ ಕಾರಣ ನೀಡಿ ಕೇಂದ್ರ ಅರಣ್ಯ ಸಲಹಾ ಸಮಿತಿ ಅನುಮೋದನೆ ಕೊಟ್ಟಿರಲಿಲ್ಲ. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು ಎಂದು ತಾಕೀತು ಮಾಡಿತ್ತು. ಇದರಿಂದಾಗಿ, ಎತ್ತಿನಹೊಳೆ ಕಾಮಗಾರಿ ಸ್ಥಗಿತವಾಗಿತ್ತು.
ಆ ಬಳಿಕ ಹಾಸನ ಹಾಗೂ ತುಮಕೂರು ಜಿಲ್ಲೆಗಳ ಡಿಸಿಎಫ್‌ಗಳು ಸೆಪ್ಟೆಂಬರ್‌ನಲ್ಲಿ ಯೋಜನಾ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ನಿಯಮ ಉಲ್ಲಂಘಿಸಿದವರ ವಿರುದ್ಧ 2019ರಲ್ಲೇ ಎಫ್‌ಐಆರ್ ದಾಖಲಿಸಲಾಗಿದೆ. ಬಯಲುಸೀಮೆ ಜಿಲ್ಲೆಗಳ ನೀರಿನ ದಾಹ ಇಂಗಿಸಲು ಈ ಯೋಜನೆ ಅಗತ್ಯ‘ ಎಂದು ಶಿಫಾರಸು ಮಾಡಿದ್ದರು.
‘ತುಮಕೂರು ಜಿಲ್ಲೆಯ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯದಲ್ಲಿ ಕಾಲುವೆ ನಿರ್ಮಿಸಲಾಗುತ್ತಿದೆ. ಇದರಿಂದ ಕಾಡಿಗೆ ಭಾರಿ ಹಾನಿಯಾಗುತ್ತದೆ. ಇದನ್ನು ತಪ್ಪಿಸಲು ನೆಲದಡಿ ಕಾಲುವೆ ನಿರ್ಮಿಸಬೇಕು‘ ಎಂದು ಸಲಹಾ ಸಮಿತಿ ಸೂಚಿಸಿತ್ತು.
‘ಕಾಲುವೆ ನಿರ್ಮಾಣಕ್ಕಾಗಿ 7,500 ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಇದೀಗ, ಈ ಭಾಗದಲ್ಲಿ ಕಾಲುವೆಯ ವಿನ್ಯಾಸ ಬದಲಿಸಲಾಗಿದೆ. 4,043 ಮರಗಳನ್ನಷ್ಟೇ ಕಡಿಯಲಾಗುತ್ತದೆ‘ ಎಂದು ತುಮಕೂರು ಡಿಸಿಎಫ್ ತಮ್ಮ ವರದಿಯಲ್ಲಿ ತಿಳಿಸಿದ್ದರು. ‘ಈ ಅರಣ್ಯದಲ್ಲಿ ಭೂಗತ ಕಾಲುವೆ ನಿರ್ಮಾಣ ಕಾರ್ಯಸಾಧುವಲ್ಲ. ಇದರಿಂದಾಗಿ, ಭೂಕುಸಿತದಂತಹ ಸಮಸ್ಯೆಗಳು ಸೃಷ್ಟಿಯಾಗಬಹುದು. ವಿನ್ಯಾಸ ಬದಲಿಸಿದ್ದರಿಂದ ರಾಜ್ಯ ಸರ್ಕಾರಕ್ಕೆ ₹170 ಕೋಟಿ ಹೆಚ್ಚುವರಿ ಹೊರೆ ಆಗಲಿದೆ‘ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
‘ಕಂದಾಯ ದಾಖಲೆಗಳ ಆಧಾರದಲ್ಲಿ ರೈತರ ಸ್ವಾಧೀನದಲ್ಲಿದ್ದ ಜಾಗಗಳಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ನಡೆಸಲಾಗಿತ್ತು. ಈ ಪ್ರದೇಶವು ಅರಣ್ಯ ಭೂಮಿ ಎಂಬುದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಗೊತ್ತಿರಲಿಲ್ಲ. ಇದು ಉದ್ದೇಶಪೂರ್ವಕ ಉಲ್ಲಂಘನೆ ಅಲ್ಲ. ಇದಕ್ಕಾಗಿ ಯಾವುದೇ ವ್ಯಕ್ತಿ ಅಥವಾ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡಬಾರದು‘ ಎಂದು ಎಸಿಎಸ್ ಅವರು ಪ್ರಸ್ತಾವದಲ್ಲಿ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.