ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ವಾಹನಗಳು ಪರಿಹಾರವಾಗಿದ್ದು, ವಾಹನಗಳ ಮಾರಾಟದಲ್ಲೂ ಗಣನೀಯ ಏರಿಕೆಯಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ವಿಧಾನಸೌಧದಲ್ಲಿ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ವಿಶೇಷ ಇವಿ ಮೇಳ -2025ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇವಿ ವಾಹನಗಳ ಬಳಕೆ ಉತ್ತೇಜಿಸಲು ಚಾರ್ಜಿಂಗ್ ಕೇಂದ್ರಗಳು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ 4,462 ಸೇರಿದಂತೆ ರಾಜ್ಯದಲ್ಲಿ 5,765 ಚಾರ್ಜಿಂಗ್ ಕೇಂದ್ರಗಳಿವೆ. 2017ರಲ್ಲಿ ವಾರ್ಷಿಕ 11 ಸಾವಿರದಷ್ಟಿದ್ದ ವಾಹನಗಳ ನೋಂದಣಿ, ಪ್ರಸ್ತುತ 1.50 ಲಕ್ಷ ತಲುಪಿದೆ ಎಂದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಸಚಿವಾಲಯ ಉದ್ಯೋಗಿಗಳು ಮುಂಗಡ ಹಣ ಪಾವತಿಸದೆ, ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ ಪಡೆದು ವಾಹನ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಮೇಳದಲ್ಲಿ 16 ಇವಿ ಕಂಪನಿಗಳು ಭಾಗವಹಿಸಿವೆ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ನಿರ್ದೇಶಕ ತಾಂತ್ರಿಕ ರಮೇಶ್ ಎಚ್.ಜೆ., ಪ್ರಧಾನ ವ್ಯವಸ್ಥಾಪಕ ಎಚ್.ಆರ್. ದಯಾನಂದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.