ಬೆಂಗಳೂರು: ‘ಕ್ರಾಂತಿವೀರ ಬ್ರಿಗೇಡ್ ಬಿಟ್ಟು ಪಕ್ಷಕ್ಕೆ ಬನ್ನಿ ಎಂದು ಅಮಿತ್ ಶಾ ಕರೆದರೂ, ಹೋಗಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕಾದವನು ನಾನು’ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಕುರಿತು ಮಾಹಿತಿ ನೀಡಿದ ಅವರು, ‘ಈ ಹಿಂದೆ ಆರಂಭಿಸಿದ್ದ ರಾಯಣ್ಣ ಬ್ರಿಗೇಡ್ ಯಶಸ್ವಿಯಾಗಿ ನಡೆಯುತ್ತಿತ್ತು. ಕೆಲವರು ಆ ಬಗ್ಗೆ ದೂರು ನೀಡಿದ್ದರು. ಅಮಿತ್ ಶಾ ಕರೆದು, ನಿಲ್ಲಿಸಿಬಿಡಿ ಎಂದರು. ಏಕೆ ನಿಲ್ಲಿಸಬೇಕು ಎಂದು ಪ್ರಶ್ನಿಸಿದಾಗ ಅವರಲ್ಲಿ ಉತ್ತರವಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಅಮಿತ್ ಶಾ ಅವರು ಕಡೆಗೆ, ‘ಛೋಡ್ ದೋ ಬಾಯ್’ ಎಂದರು. ಆಗ ಹಿರಿಯರ ಮಾತು ಕೇಳುವ ಸ್ಥಿತಿಯಲ್ಲಿದ್ದೆ. ರಾಯಣ್ಣ ಬ್ರಿಗೇಡ್ ಬಿಟ್ಟೆ. ಆದರೆ ಈಗ ನಾನು ಯಾರ ಮಾತನ್ನೂ ಕೇಳುವುದಿಲ್ಲ’ ಎಂದರು.
‘ಇದು ನೂರಾರು ಸ್ವಾಮೀಜಿಗಳ ಮುಂದಾಳತ್ವದಲ್ಲಿ ನಡೆಯುತ್ತಿರುವ ಬ್ರಿಗೇಡ್. ನಾನಿದರಲ್ಲಿ ಸಂಚಾಲಕ ಅಷ್ಟೆ. ಇದನ್ನು ಬಿಡಿ ಎಂದು ಮೋದಿಯವರಾಗಲಿ, ಶಾ ಅವರಾಗಲಿ ಹೇಳುವುದಿಲ್ಲ. ಇದು ಹಿಂದೂಗಳ, ಹಿಂದುಳಿದವರ ಮತ್ತು ದಲಿತರ ರಕ್ಷಣೆಗಾಗಿ ಆರಂಭಿಸಿರುವ ಸಂಘಟನೆ. ಹಿಂದೂಗಳಿಗೆ ಎಲ್ಲೇ ಅನ್ಯಾಯವಾದರೂ ಕ್ರಾಂತಿವೀರ ಬ್ರಿಗೇಡ್ ಅವರ ಪರವಾಗಿ ಹೋರಾಟ ನಡೆಸಲಿದೆ’ ಎಂದರು.
‘ಹಿಂದೂಗಳ ರಕ್ಷಣೆಗಾಗಿ ಬ್ರಿಗೇಡ್’: ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆಯ ಹಿಂದಿನ ಉದ್ದೇಶವನ್ನು ವಿವರಿಸಿದ ಈಶ್ವರಪ್ಪ ಅವರು, ‘ರಾಜ್ಯದಲ್ಲಿ ಹಿಂದುಳಿದವರು ಮತ್ತು ದಲಿತರ ಮೇಲೆ ಅನ್ಯಾಯ ನಡೆದಾಗ ಯಾರೂ ಅವರ ನೆರವಿಗೆ ಧಾವಿಸುವುದಿಲ್ಲ. ಅವರ ನೆರವಿಗೆ ನಿಲ್ಲಲು ಬ್ರಿಗೇಡ್ ಸ್ಥಾಪಿಸುತ್ತಿದ್ದೇವೆ’ ಎಂದರು.
‘ಒಟ್ಟಾರೆಯಾಗಿ ಹಿಂದೂಗಳ ರಕ್ಷಣೆಯೇ ನಮ್ಮ ಉದ್ದೇಶ. ವಕ್ಫ್ ಭೂಮಿ ವಿಚಾರ, ಗೋಶಾಲೆಗಳ ರದ್ದತಿ, ಲವ್ ಜಿಹಾದ್ ವಿರುದ್ಧ ಹೋರಾಡುತ್ತೇವೆ’ ಎಂದರು.
‘ಈ ಎಲ್ಲ ವಿಚಾರಗಳಲ್ಲಿ ಹೋರಾಡಲು ಆರ್‌ಎಸ್‌ಎಸ್, ಬಜರಂಗ ದಳ ಇವೆಯಲ್ಲಾ. ಹೇಗೆ ಭಿನ್ನ? ಹಿಂದುಳಿದವರು ಮತ್ತು ದಲಿತರ ಪರವಾಗಿಯಷ್ಟೇ ಹೋರಾಡುತ್ತೀರಾ’ ಎಂಬ ಪ್ರಶ್ನೆಗೆ ಈಶ್ವರಪ್ಪ, ‘ನಾವು ಹಿಂದೂಗಳ ರಕ್ಷಣೆಗೆ ನಿಲ್ಲುತ್ತೇವೆ. ಅದರಲ್ಲೇ ಹಿಂದುಳಿದವರು ಮತ್ತು ದಲಿತರು ಸೇರಿಹೋಗುತ್ತಾರೆ’ ಎಂದು ಉತ್ತರಿಸಿದರು.
ಕ್ರಾಂತಿವೀರ ಬ್ರಿಗೇಡ್‌ನ ಮಾರ್ಗದರ್ಶಕ ಮಂಡಳಿ ಅಧ್ಯಕ್ಷ ಮಕ್ಣಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ, ‘ಫೆಬ್ರುವರಿ 4ರಂದು ಬಸವನ ಬಾಗೇವಾಡಿಯಲ್ಲಿ ಬ್ರಿಗೇಡ್‌ನ ಉದ್ಘಾಟನಾ ಸಮಾರಂಭ ನಡೆಯಲಿದೆ. ದೇಶದ ವಿವಿಧೆಡೆಯಿಂದ 1,008 ಸಾಧು–ಸಂತರು ಭಾಗಿಯಾಗಲಿದ್ದಾರೆ. ಲಕ್ಷಾಂತರ ಜನ ಸೇರಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಪಕ್ಷವು ಕುಟುಂಬವೊಂದರ ಹಿಡಿತದಲ್ಲಿದೆ ಎಂದೇ ನಾನು ಹೊರಬಂದೆ. ಈಗ ಪಕ್ಷದೊಳಗೇ ಆ ಬಗ್ಗೆ ದೊಡ್ಡ ಸಂಘರ್ಷ ನಡೆಯುತ್ತಿದೆಕೆ.ಎಸ್.ಈಶ್ವರಪ್ಪ ಕ್ರಾಂತಿವೀರ ಬ್ರಿಗೇಡ್‌ನ ಸಂಚಾಲಕ
‘ಪ್ರಿಯಾಂಕ್ ರಾಜೀನಾಮೆ ನೀಡಲಿ’
‘ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಬಳಿ ದೊರೆತ ಟೈಪು ಮಾಡಲಾದ ಪತ್ರದಲ್ಲಿ ನನ್ನ ಹೆಸರಿತ್ತು ಎಂಬ ಕಾರಣಕ್ಕೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದೆ. ಆಮೇಲೆ ನಿರ್ದೋಷಿಯಾಗಿ ಹೊರಬಂದೆ. ತಾವು ನಿರ್ದೋಷಿ ಎಂದಾಗಿದ್ದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ ತನಿಖೆ ಎದುರಿಸಲಿ’ ಎಂದು ಈಶ್ವರಪ್ಪ ಸವಾಲು ಹಾಕಿದರು. ‘ಸಚಿನ್ ಪಾಂಚಾಳ ಬರೆದ ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ. ಅವರು ರಾಜೀನಾಮೆ ನೀಡದೆ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ರಾಜೀನಾಮೆ ನೀಡಿ ಆ ಮೂವರ ಹೊರೆಯನ್ನೂ ಇಳಿಸಿ’ ಎಂದರು. ‘ನನ್ನ ರಾಜೀನಾಮೆ ಕೇಳುವಾಗ ಪ್ರಿಯಾಂಕ್ ಏನೆಲ್ಲಾ ಮಾತನಾಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಹಲವು ವಿಡಿಯೊಗಳು ಇವೆ. ನನಗೊಂದು ನ್ಯಾಯ ಅವರಿಗೊಂದು ನ್ಯಾಯವೇ? ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.