ಬೆಂಗಳೂರು ವಕೀಲರ ಸಂಘ
ಬೆಂಗಳೂರು: ರಾಜ್ಯದಲ್ಲಿ ಸಂಜೆ ನ್ಯಾಯಾಲಯಗಳ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ‘ಬೆಂಗಳೂರು ವಕೀಲರ ಸಂಘ’ (ಎಎಬಿ), ‘ತಕ್ಷಣವೇ ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ಬೆಂಗಳೂರು ಜಿಲ್ಲಾ ಕೋರ್ಟ್ ಪ್ರಧಾನ ನ್ಯಾಯಾಧೀಶರಿಗೆ ಪತ್ರ ಬರೆದಿದೆ.
ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್ ಸಹಿ ಮಾಡಿರುವ ಈ ಪತ್ರವನ್ನು ಬೆಂಗಳೂರು ಜಿಲ್ಲಾ ಪ್ರಧಾನ ನ್ಯಾಯಾಧೀಶ ಮುರಳೀಧರ ಪೈ ಅವರಿಗೆ ಸಲ್ಲಿಸಲಾಗಿದೆ.
ಪತ್ರದಲ್ಲಿ ಏನಿದೆ?: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಸಮಸ್ತ ವಕೀಲ ವೃಂದ ದಿನದಲ್ಲಿ 12 ಗಂಟೆಗಳಿಗೂ ಹೆಚ್ಚಿನ ಸಮಯದ ಹೊರೆ ಹೊಂದಿರುತ್ತದೆ. ಕೆಲಸದ ದಿನಗಳಲ್ಲಿ ನಿತ್ಯ 16 ಗಂಟೆ ಕಠಿಣ ಪರಿಶ್ರಮ ಪಡಬೇಕಾದ ಅನಿವಾರ್ಯತೆ ಇರುತ್ತದೆ. ಭಾನುವಾರದ ಬಿಡುವೂ ಇರುವುದಿಲ್ಲ. ವಾರಾಂತ್ಯದಲ್ಲೂ ವೃತ್ತಿ ಸಂಬಂಧಿತ ಕೆಲಸಗಳ ಭಾರ ದಂಡಿಯಾಗಿ ಬಿದ್ದಿರುತ್ತದೆ.
ಪ್ರತಿದಿನ, ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಕಚೇರಿ ಮತ್ತು ನ್ಯಾಯಾಲಯಕ್ಕೆ ಹಾಜರಾದ ನಂತರ ಸಂಜೆ ಪುನಃ ನ್ಯಾಯಾಲಯಗಳಿಗೆ ಹಾಜರಾಗಿ ಕೆಲಸ ಮಾಡಬಲ್ಲರು ಎಂಬ ನಿರೀಕ್ಷೆ ಒಪ್ಪತಕ್ಕದ್ದಲ್ಲ. ಕೋರ್ಟ್ ಸಮಯದ ನಂತರ ಅವರು ಸಂಜೆ ಸಮಯದಲ್ಲಿ ತಮ್ಮ ಕಚೇರಿಗಳಲ್ಲಿ ಇದ್ದುಕೊಂಡು ಕಕ್ಷಿದಾರರನ್ನು ಭೇಟಿ ಮಾಡಬೇಕಾಗುತ್ತದೆ. ಮುಂದಿನ ಪ್ರಕರಣಗಳಿಗೆ ತಯಾರಿ, ಕರಡು ರೂಪಿಸುವುದು ಮತ್ತು ಇತರೆ ದಸ್ತಾವೇಜಿನ ಅಗತ್ಯ ಕೆಲಸಗಳನ್ನು ಪೂರೈಸಬೇಕಿರುತ್ತದೆ. ಒಂದು ವೇಳೆ ಸಂಜೆ ನ್ಯಾಯಾಲಯಗಳನ್ನೂ ಆರಂಭಿಸಿದರೆ ಮರುದಿನದ ಕೆಲಸಗಳಿಗೆ ಅಣಿಯಾಗುವ ಪ್ರಕ್ರಿಯೆ ಮತ್ತು ಅವಶ್ಯ ಚಟುವಟಿಕೆಗಳಿಗೆ ತಡೆ ಒಡ್ಡಿದಂತಾಗಲಿದೆ.
ಇಂತಹ ವಿಷಮ ಸನ್ನಿವೇಶದಲ್ಲಿ ವಕೀಲರ ಮೇಲಿರುವ ಒತ್ತಡಗಳ ನಿವಾರಣೆಗೆ ಮಾರ್ಗೋಪಾಯ ಕಂಡುಕೊಳ್ಳುವ ಬದಲು, ಸಂಜೆ ನ್ಯಾಯಾಲಯಗಳ ಪ್ರಸ್ತಾವನೆ ಮುಂದಿರಿಸಿರುವುದು ತರವಲ್ಲ.ಈ ಪ್ರಸ್ತಾವನೆಯನ್ನು ವಕೀಲರು ವಿರೋಧಿಸುತ್ತಿದ್ದಾರೆ. ಹಾಗಾಗಿ, ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು ಎಂದು ಎರಡು ಪುಟಗಳ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.