ADVERTISEMENT

ಮತದಾನದ ಗುಟ್ಟು ಸಾಮಾಜಿಕ ಜಾಲತಾಣದಲ್ಲಿ ‘ರಟ್ಟು’!

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 13:18 IST
Last Updated 23 ಏಪ್ರಿಲ್ 2019, 13:18 IST
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ   

ಅಥಣಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಇಲ್ಲಿನ ಕೆಲವರು ತಾವು ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ಚಿತ್ರಸಮೇತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ಎಲ್ಲೆಡೆಯೂ ಹರಿದಾಡಿದೆ; ಹಬ್ಬಿದೆ.

ಮತಗಟ್ಟೆಗಳಿಗೆ ಮೊಬೈಲ್‌ ಫೋನ್ ನಿಷೇಧಿಸಲಾಗಿತ್ತು. ಆದರೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಕೆಲವರು, ವಿದ್ಯುನ್ಮಾನ ಮತಯಂತ್ರಗಳಲ್ಲಿ ಮತದಾನ ಮಾಡಿದ್ದನ್ನು ಫೋಟೊ ತೆಗೆದು ಹಾಕಿದ್ದಾರೆ. ವಿವಿಪ್ಯಾಟ್‌ನಲ್ಲಿ ಮತದಾನ ಮಾಡಿದ್ದಕ್ಕೆ ಖಾತ್ರಿಗಾಗಿ ಪ್ರದರ್ಶನಗೊಳ್ಳುವ ಚೀಟಿಯ ಫೋಟೊ ಕೂಡ ತೆಗೆದಿದ್ದಾರೆ. ಕೆಲವು ಮತದಾರರು ಇಷ್ಟೆಲ್ಲಾ ಮಾಡಿದರೂ ಪೊಲೀಸರು ಹಾಗೂ ಮತಗಟ್ಟೆ ಸಿಬ್ಬಂದಿ ಗಮನಹರಿಸದಿರುವುದು ಅಚ್ಚರಿಗೆ ಕಾರಣವಾಗಿದೆ!

‘ನಾನು ಇಂಥವರಿಗೆ, ಇಂಥ ಪಕ್ಷಕ್ಕೆ ಮತ ಹಾಕಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲ ತಿಳಿಸುವ ಮೂಲಕ ಗುಪ‍್ತ ಮತದಾನ ವ್ಯವಸ್ಥೆಯನ್ನೇ ಅಣಕಿಸಿದ್ದಾರೆ. ಇದಲ್ಲದೇ, ಮಾದರಿ ನೀತಿಸಂಹಿತೆಯನ್ನೂ ಉಲ್ಲಂಘಿಸಿದ್ದಾರೆ. ನಿಷೇಧವಿದ್ದರೂ ಮೊಬೈಲ್ ತೆಗೆದುಕೊಂಡು ಹೋಗಿದ್ದು ಹೇಗೆ ಎನ್ನುವ ಪ್ರಶ್ನೆ ಚರ್ಚೆಗೆ ಒಳಗಾಗಿದೆ. ಪೊಲೀಸರ ಕಾರ್ಯವೈಖರಿ ಬಗ್ಗೆ ಅನುಮಾನಗಳು ಕೂಡ ವ್ಯಕ್ತವಾಗಿವೆ.

ADVERTISEMENT

ಹೋದ ವರ್ಷ ಜರುಗಿದ್ದ ವಿಧಾನಸಭಾ ಚುನಾವಣೆಯಲ್ಲೂ ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವರು ಮತಯಂತ್ರದ ಫೋಟೊ ತೆಗೆದು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲೂ ಹರಿದಾಡಿದ್ದವು. ಇಷ್ಟಾದರೂ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಇದರಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.