ADVERTISEMENT

ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶಕೊಟ್ಟ ಕೆಎಸ್‌ಒಯು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಮಹತ್ವದ ತೀರ್ಮಾನ; ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 27 ಮೇ 2019, 10:25 IST
Last Updated 27 ಮೇ 2019, 10:25 IST
ಪ್ರೊ.ಡಿ.ಶಿವಲಿಂಗಯ್ಯ
ಪ್ರೊ.ಡಿ.ಶಿವಲಿಂಗಯ್ಯ   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು, 2011–12 ಹಾಗೂ 2012–13ನೇ ಸಾಲಿನ ಬಿ.ಎ ಹಾಗೂ ಬಿ.ಕಾಂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮಹತ್ವದ ತೀರ್ಮಾನ ಕೈಗೊಂಡಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಲ್ಲ ಕೋರ್ಸ್‌ಗಳಿಗೂ ಕೋರ್ಸ್‌ ಅವಧಿಯ ಜತೆಗೆ ಹೆಚ್ಚುವರಿ 2 ವರ್ಷ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಮಾನ್ಯತೆ ರದ್ದಾಗಿದ್ದ ಕಾರಣ, ಈ ಸಾಲಿನ ವಿದ್ಯಾರ್ಥಿಗಳಿಗೆ ವಿ.ವಿ ಪರೀಕ್ಷೆ ನಡೆಸಿರಲಿಲ್ಲ. ಈ ಹಿನ್ನೆಲೆಯಲ್ಲಿ 2011–12ನೇ ಸಾಲಿನ ವಿದ್ಯಾರ್ಥಿಗಳಿಗೆ ಒಂದು ಬಾರಿ, 2012–13ನೇ ಸಾಲಿನ ವಿದ್ಯಾರ್ಥಿಗಳಿಗೆ 2 ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2018–19ನೇ ಸಾಲಿಗೆ 2018ರ ಜುಲೈನಲ್ಲಿ ದಾಖಲಾತಿ ಪಡೆದಿದ್ದ ವಿದ್ಯಾರ್ಥಿಗಳ ಜತೆಗೆ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಪರೀಕ್ಷೆಗಳು ಜುಲೈನಲ್ಲಿ ನಡೆಯಲಿವೆ. ಪರೀಕ್ಷೆಗೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಪರೀಕ್ಷಾ ಶುಲ್ಕ ಪಾವತಿಸಿದ ಬಳಿಕ ಪರೀಕ್ಷಾ ಚೀಟಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಅಂತೆಯೇ, 2008 ಹಾಗೂ 2012ನೇ ಸಾಲಿನಲ್ಲಿ ನೋಂದಣಿಯಾಗಿದ್ದ ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಸಂಶೋಧನಾ ಕಾರ್ಯ ಮುಂದುವರೆಸಲು ಅವಕಾಶ ನೀಡಲಾಗಿದೆ. ಒಟ್ಟು 118 ಮಂದಿ ನೋಂದಣಿಯಾಗಿದ್ದರು. ‘ಯುಜಿಸಿ’ಯು ಸಂಶೋಧನಾ ಕಾರ್ಯಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಜೂನ್‌ 2ರಿಂದ ಕೌಶಲ ತರಬೇತಿ: ಕೆಎಸ್‌ಒಯುವಿನಲ್ಲಿ ಯಾವುದೇ ಕೋರ್ಸ್‌ಗೆ ನೋಂದಣಿಯಾದರೂ ಕೌಶಲ ತರಬೇತಿ ಪಡೆಯುವುದು ಕಡ್ಡಾಯ. ಅದರಂತೆ, ಜೂನ್ 2ರಿಂದ 30ರವರೆಗೆ ವಿವಿಧ ದಿನಾಂಕಗಳಲ್ಲಿ ತರಬೇತಿ ನಡೆಯಲಿವೆ.

ಆಡಳಿತ ಕನ್ನಡ, ಸಂವಹನ ಇಂಗ್ಲಿಷ್‌ ಹಾಗೂ ಜೀವನ ಕಲೆ, ವೆಬ್‌ ಡಿಸೈನಿಂಗ್, ಕಂಪ್ಯೂಟರ್‌ ಶಿಕ್ಷಣ, ಡೆಸ್ಕ್‌ ಟಾಪ್‌ ಪಬ್ಲಿಷಿಂಗ್, ಮಲ್ಟಿಮೀಡಿಯಾ ಹಾಗೂ ನೆಟ್‌ವರ್ಕಿಂಗ್‌ ವಿಷಯಗಳಿಗೆ ತರಬೇತಿ ನೀಡಲಾಗುವುದು. ಮೈಸೂರು, ಬೆಂಗಳೂರು, ದಾವಣಗೆರೆ, ಧಾರವಾಡ, ಕಲಬುರ್ಗಿ ಹಾಗೂ ಉಡುಪಿಯಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.ksoumysore.karnataka.gov.in ವೀಕ್ಷಿಸಬಹುದು ಎಂದು ತಿಳಿಸಿದರು.

ಕುಲಸಚಿವ ಪ್ರೊ.ರಮೇಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.