ಪರೀಕ್ಷೆ
ಬೆಂಗಳೂರು: ಮಾನ್ಯತೆ ಪಡೆಯದ, ನವೀಕರಣ ಹೊಂದದ ಅನಧಿಕೃತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ.
ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಯಾ ಜಿಲ್ಲೆಯ ಉಪ ನಿರ್ದೇಶಕರು ಮಾನ್ಯತೆ ಪಡೆಯದ, ನವೀಕರಣ ಹೊಂದದ ಅನಧಿಕೃತ ಶಾಲೆಗಳ ಮಾಹಿತಿಯನ್ನು ಮಂಡಳಿಗೆ ಸಲ್ಲಿಸಬೇಕು. ಅನಧಿಕೃತ ಶಾಲೆಗಳ ಕಾರಣಕ್ಕೆ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಬಿಇಒ, ಡಿಡಿಪಿಐಗಳನ್ನೇ ಹೊಣೆ ಮಾಡಲಾಗುವುದು. ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿಯ ನಿರ್ದೇಶಕರು ಎಚ್ಚರಿಸಿದ್ದಾರೆ.
ಅನಧಿಕೃತ ಶಾಲೆಗಳನ್ನು ಮುಚ್ಚಲು ಆದೇಶ ನೀಡಿದ್ದರೆ ಅಥವಾ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಗಳು ಮುಚ್ಚಿದ್ದರೆ ಅಂತಹ ಶಾಲೆಗಳ ಸಂಕೇತ ಸಂಖ್ಯೆಯನ್ನು ಮಂಡಳಿಗೆ ಸಲ್ಲಿಸಬೇಕು. ಸಿಬಿಎಸ್‌ಇ, ಐಸಿಎಸ್‌ಇಯಿಂದ ರಾಜ್ಯಪಠ್ಯಕ್ರಮಕ್ಕೆ ಬದಲಾದ ವಿದ್ಯಾರ್ಥಿಗಳ ಮಾಹಿತಿಯನ್ನು ತಕ್ಷಣ ಒದಗಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.