ADVERTISEMENT

ಭ್ರಷ್ಟಾಚಾರದ ಬಗ್ಗೆ ಸಾಕ್ಷ್ಯ ನೀಡಿದರೆ ರಾಜೀನಾಮೆ: ಸಚಿವ ತಿಮ್ಮಾಪುರ ಸವಾಲು

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 20:08 IST
Last Updated 30 ಜನವರಿ 2026, 20:08 IST
 ಆರ್.ಬಿ ತಿಮ್ಮಾಪುರ 
 ಆರ್.ಬಿ ತಿಮ್ಮಾಪುರ    

ಬೆಂಗಳೂರು: ‘ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ಹಣ ಪಡೆದಿರುವ ಬಗ್ಗೆ ಸಾಕ್ಷ್ಯಾಧಾರ ನೀಡಿದರೆ ಆ ಕ್ಷಣವೇ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರು ಪ್ರತಿಪಕ್ಷಕ್ಕೆ ಸವಾಲು ಹಾಕಿದರು.

‘ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತವಾಗಿದ್ದು, ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಇದರಿಂದ ನನಗೆ ತೀವ್ರ ನೋವಾಗಿದೆ’ ಎಂದು ಹೇಳಿದರು.

ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಎನ್‌. ರವಿಕುಮಾರ್‌, ಭಾರತಿ ಶೆಟ್ಟಿ, ನವೀನ್‌, ಜೆಡಿಎಸ್‌ನ ಟಿ.ಎ. ಶರವಣ ಅವರು ‘ಅಬಕಾರಿ ಇಲಾಖೆಯಲ್ಲಿ ಸಿಎಲ್‌–2, ಸಿಎಲ್‌–7 ಮತ್ತು ಸಿಎಲ್‌–9ಗಳಿಗೆ ನಿಯಮಾನುಸಾರ ಪರವಾನಗಿ ನೀಡುವ ಬದಲು ದರಪಟ್ಟಿ ನಿಗದಿಪಡಿಸುತ್ತಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವ, ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ’ ನಿಯಮ 330ರಡಿ ಚರ್ಚಿಸಿದ  ವಿಷಯಕ್ಕೆ ಅವರು ಉತ್ತರ ನೀಡಿದರು.

ADVERTISEMENT

‘ಪರವಾನಗಿ ನೀಡಲು ಆನ್‌ಲೈನ್‌ನಲ್ಲಿ ಸಮಯ ನಿಗದಿ ಮಾಡಲಾಗಿದೆ. ಇಲಾಖೆಯಲ್ಲಿ ಎಲ್ಲ ರೀತಿಯಲ್ಲೂ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಪರವಾನಗಿ ನೀಡುವ ವಿಷಯ ಸಚಿವರವರೆಗೆ ಬರುವುದೇ ಇಲ್ಲ’ ಎಂದು ತಿಮ್ಮಾಪುರ ಹೇಳಿದರು.

‘ಐದು ವರ್ಷ ಒಂದೇ ಕಡೆ ಇರುವವರನ್ನು ಬೇರೆಡೆಗೆ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲಾಗಿದೆ. 48 ಗಂಟೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಈ ಪ್ರಕ್ರಿಯೆ ನಡೆದಿದೆ. ನನ್ನ ಮೇಲೆ ದೂರು ನೀಡಿರುವ ವೈನ್‌ ಮರ್ಚೆಂಟ್ಸ್‌ ಸಂಘದ ನೋಂದಣಿಯೇ ರದ್ದಾಗಿದೆ’ ಎಂದು ಹೇಳಿದರು.

‘ವೈನ್‌ ಮರ್ಚೆಂಟ್ಸ್‌ ಸಂಘದ ಲಕ್ಷ್ಮೀನಾರಾಯಣ ಹೇಳಿಕೆ ಆಧರಿಸಿ ಅಬಕಾರಿ ಸಚಿವರ ಮೇಲೆ ವಿರೋಧ ಪಕ್ಷದವರು ಇಷ್ಟೊಂದು ಆರೋಪ ಮಾಡುವುದು ಸರಿಯಲ್ಲ. ಅಬಕಾರಿ ಸಚಿವರು ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಅವರ ಉತ್ತರಕ್ಕೆ ಸರ್ಕಾರ ಬೆಂಬಲವಾಗಿ ನಿಂತಿದೆ’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಅವರು ಸರ್ಕಾರದ ಪರವಾಗಿ ಹೇಳಿಕೆ ನೀಡಿದರು.

‘ಅಬಕಾರಿ ಇಲಾಖೆ ಉಪ ಆಯುಕ್ತ ₹25 ಲಕ್ಷ ಪಡೆದುಕೊಂಡಿರುವುದು, ಸಚಿವರು ಸೇರಿದಂತೆ ಯಾರಿಗೆಲ್ಲ ಲಂಚ ನೀಡಲಾಗುತ್ತದೆ ಎಂದು ಹೇಳಿರುವುದು ಸಾಕ್ಷಿ ಅಲ್ಲವೇ? ಇದೆಲ್ಲರ ನೈತಿಕ ಹೊಣೆ ಹೊತ್ತು ತಿಮ್ಮಾಪುರ ರಾಜೀನಾಮೆ ನೀಡಬೇಕು’ ಎಂದು ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು. ರವಿಕುಮಾರ್‌, ನವೀನ್‌, ಪ್ರತಾಪ್‌ಸಿಂಹ ನಾಯಕ್‌ ಸೇರಿದಂತೆ ಬಿಜೆಪಿ ಸದಸ್ಯರು ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸಭಾಪತಿ, ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

‘ಎರಡು ವರ್ಷದಲ್ಲಿ 5,500 ಲೈಸೆನ್ಸ್‌’

‘ಅಬಕಾರಿ ಇಲಾಖೆಯಲ್ಲಿ ಎರಡು ವರ್ಷದಲ್ಲಿ ಹೊಸ 5,500 ಲೈಸೆನ್ಸ್‌ಗಳನ್ನು ನೀಡಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಲೈಸೆನ್ಸ್‌ ನೀಡಿರುವುದರ ಅಂಕಿ–ಅಂಶವನ್ನು ಅಬಕಾರಿ ಸಚಿವರೇ ನೀಡಿದ್ದಾರೆ. ಈ ಸಂಖ್ಯೆಯನ್ನು ‘ದರಪಟ್ಟಿ’1ಕ್ಕೆ ಹೋಲಿಸಿದರೆ, ವೈನ್‌ ಮರ್ಚೆಂಟ್ಸ್‌ ಸಂಘದವರು ಹೇಳಿರುವ ₹6 ಸಾವಿರ ಕೋಟಿ ಅವ್ಯವಹಾರಕ್ಕೆ ಪುರಾವೆಯಾಗುತ್ತದೆ’ ಎಂದು ಬಿಜಿಪಿಯ ಕೆ.ಎಸ್‌. ನವೀನ್‌ ದೂರಿದರು.

‘ಈ ಆರೋಪ ಕುರಿತು ಸಚಿವರನ್ನು ತನಿಖೆಗೆ ಒಳಪಡಿಸಬೇಕು. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಬೇಕು’ ಎಂದು ಆಗ್ರಹಿಸಿದರು.

‘ಪ್ರತಿಯೊಂದು ಪರವಾನಗಿ ನವೀಕರಣಕ್ಕೆ ಹಣ ನಿಗದಿಯಾಗಿದೆ. ಅಲ್ಲದೆ, ಸಾವಿರಾರು ರೂಪಾಯಿಯನ್ನು ಪ್ರತಿ ತಿಂಗಳು ‘ಮಾಮೂಲಿ’ ನೀಡಬೇಕು. ಇದೆಲ್ಲ  ಭ್ರಷ್ಟಾಚಾರ ಅಲ್ಲವೇ’ ಎಂದು ಬಿಜೆಪಿಯ ಎನ್. ರವಿಕುಮಾರ್‌ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.