ADVERTISEMENT

ಮಹಿಳೆಯ ಖಾಸಗಿ ಭಾಗ ಮೊಬೈಲ್‌ನಲ್ಲಿ ಸೆರೆ: ಆರೋಪಿಗೆ ಹೈಕೋರ್ಟ್‌ ಜಾಮೀನು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:27 IST
Last Updated 25 ನವೆಂಬರ್ 2021, 16:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಹಳೆಯ ಗೆಳತಿ ಮದುವೆಯಾದ ಮೇಲೂ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಇರಿಸಿಕೊಂಡು, ಆಗಾಗ್ಗೆ ಆಕೆಯ ನಗ್ನ ದೇಹದ ಖಾಸಗಿ ಭಾಗವನ್ನು ವಿಡಿಯೊ ಕಾಲ್‌ ಮೂಲಕ ದರ್ಶಿಸುತ್ತಿದ್ದ ಮತ್ತು ಅಂತಹ ದೃಶ್ಯಗಳ ಸ್ಕ್ರೀನ್‌ ಶಾಟ್‌ಗಳನ್ನು ಸೇವ್‌ ಮಾಡಿಕೊಂಡು ನಂತರ ಅದನ್ನು ಆಕೆಯ ಗಂಡನಿಗೇ ರವಾನಿಸಿ ಜೈಲು ಸೇರಿರುವ ಆರೋಪಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ನೀಡುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು (ಸಿಆರ್‌ಎಲ್‌.ಪಿ ಸಂಖ್ಯೆ 102000/2021) ಧಾರವಾಡ ಹೈಕೋರ್ಟ್‌ನ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

32 ವರ್ಷದ ಆರೋಪಿ ಮತ್ತು 25ರ ಮಹಿಳೆ ಇಬ್ಬರೂ ಸಂಬಂಧಿಕರು. ಮದುವೆಗೂ ಮುನ್ನ ಅಂದರೆ, 2018ರ ಅಂತ್ಯದಿಂದಲೂ ಮಹಿಳೆಯು ಆರೋಪಿ ಜೊತೆ ಹೊಲದಲ್ಲಿ ಆಗಾಗ್ಗೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದರು. ಮದುವೆಯಾದ ಮೇಲೂ ಆರೋಪಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುತ್ತಿದ್ದ. ಕೆಲವೊಮ್ಮೆ ಬೆಳಗಿನ ಜಾವ 4ರಿಂದ 5 ಗಂಟೆಯ ಮಧ್ಯದಲ್ಲಿ ವಿಡಿಯೊ ಕಾಲ್‌ ಮಾಡಿ ಆಕೆಯ ದೇಹದ ಖಾಸಗಿ ಭಾಗಗಳನ್ನು ನೋಡುತ್ತಿದ್ದ.

ADVERTISEMENT

ಏತನ್ಮಧ್ಯೆ, 2021ರ ಮಾರ್ಚ್‌ ತಿಂಗಳಲ್ಲಿ ಮಹಿಳೆ 15 ದಿನಗಳ ಕಾಲ ಆರೋಪಿಯೊಂದಿಗಿನ ಫೋನ್ ಸಂಪರ್ಕ ಕಡಿತಗೊಳಿಸಿದ್ದಳು. ಇದರಿಂದ ಕುಪಿತನಾದ ಆರೋಪಿ ತನ್ನ ಮೊಬೈಲ್‌ನಲ್ಲಿ ಸೇವ್‌ ಮಾಡಿ ಇರಿಸಿಕೊಂಡಿದ್ದ ಆಕೆಯ ನಗ್ನ ದೇಹದ ಖಾಸಗಿ ಭಾಗಗಳ ಸ್ಕ್ರೀನ್‌ ಶಾಟ್‌ಗಳನ್ನು ಅವಳ ಗಂಡನಿಗೇ ರವಾನಿಸಿದ್ದ. ಈ ಸಂಬಂಧ ದೂರು ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು 2021ರ ಏಪ್ರಿಲ್‌ ಮೊದಲ ವಾರದಲ್ಲಿ ಬಂಧಿಸಿದ್ದರು.

ಸೆಷನ್ಸ್‌ ನ್ಯಾಯಾಲಯ ಜಾಮೀನು ನಿರಾಕರಿಸಿದ್ದ ಕಾರಣ ಆರೋಪಿ ಜೈಲು ಸೇರಿದ್ದ. ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಆರೋಪಿಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ‘ಈ ಪ್ರಕರಣದಲ್ಲಿ ಆರೋಪಿ ಮತ್ತು ಮಹಿಳೆಯ ಮಧ್ಯದಲೈಂಗಿಕ ಸಂಪರ್ಕ ಸಹಮತದಿಂದ ಕೂಡಿದೆ. ಮಹಿಳೆಯೇ ಸ್ವತಃ ತನ್ನ ದೇಹದ ಖಾಸಗಿ ಭಾಗಗಳನ್ನು ಆರೋಪಿಗೆ ಪ್ರದರ್ಶಿಸಿದ್ದಾಳೆ. ಇದು ಆಕೆಯ ಒಪ್ಪಿಗೆಯ ಪ್ರದರ್ಶನ ಆಗಿರುವುದರಿಂದ ಆರೋಪಿಗೆ ಜಾಮೀನು ನೀಡಲಾಗುತ್ತಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.