ADVERTISEMENT

ಪಿಯು ಶಿಕ್ಷಣದ ‘ಅಸ್ಮಿತೆ’ಗೆ ತಜ್ಞರ ಸಾಥ್: ಆಯೋಗಕ್ಕೆ ಮನವಿ ಸಲ್ಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 14:20 IST
Last Updated 24 ಜನವರಿ 2024, 14:20 IST
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಚಿಂತಕರಾದ ಶ್ರೀಪಾದ್ ಭಟ್, ಎಚ್.ಎಲ್. ಪುಷ್ಪಾ, ಎಲ್.ಎನ್. ಮುಕುಂದರಾಜ್, ಜಿ.ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಚಿಂತಕರಾದ ಶ್ರೀಪಾದ್ ಭಟ್, ಎಚ್.ಎಲ್. ಪುಷ್ಪಾ, ಎಲ್.ಎನ್. ಮುಕುಂದರಾಜ್, ಜಿ.ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಪದವಿಪೂರ್ವ ಶಿಕ್ಷಣದ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡು ಸಮಗ್ರ ಶಿಕ್ಷಣದ ಪರಿಕಲ್ಪನೆಯ ನೀತಿ ರೂಪಿಸಲು ಸರ್ಕಾರ ಹಾಗೂ ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ಮನವಿ ಸಲ್ಲಿಸಲು ಶಿಕ್ಷಣ ತಜ್ಞರು ಹಾಗೂ ಉಪನ್ಯಾಸಕರು ನಿರ್ಧರಿಸಿದರು.

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಬುಧವಾರ ಹಮ್ಮಿಕೊಂಡಿದ್ದ ‘ರಾಜ್ಯ ಶಿಕ್ಷಣ ನೀತಿಯಲ್ಲಿ ಪದವಿಪೂರ್ವ ಶಿಕ್ಷಣದ ಅಸ್ಮಿತೆ’ ಕುರಿತ ಚಿಂತನಾ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ’ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಗಳಿಂದಾಗಿ ಪದವಿಪೂರ್ವ ಶಿಕ್ಷಣ ಇತ್ತೀಚಿನ ದಿನಗಳಲ್ಲಿ ತನ್ನ ಅಸ್ಮಿತೆ ಕಳೆದುಕೊಳ್ಳುತ್ತಿದೆ. ಹಿಂದೆ ಒಂದೇ ವರ್ಷಕ್ಕೆ ಸೀಮಿತವಾಗಿದ್ದ ಪದವಿಪೂರ್ವ ಶಿಕ್ಷಣವನ್ನು ಎರಡು ವರ್ಷಗಳ ಅವಧಿಗೆ ನಿಗದಿ ಮಾಡುವ ಮುನ್ನ ಸಾಕಷ್ಟು ಚಿಂತನೆಗಳು ನಡೆದಿವೆ. ಇಂದು ಪರಿಸ್ಥಿತಿ ಬದಲಾಗಿದೆ. ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳ ಸಂಖ್ಯೆ ಹೆಚ್ಚಾಗಿವೆ. ರಾಜ್ಯ ಸರ್ಕಾರವೂ ಪಬ್ಲಿಕ್‌ ಶಾಲೆಗಳ ಸಂಖ್ಯೆ ಹೆಚ್ಚಳ ಮಾಡುತ್ತಿದೆ. ಈಗಾಗಲೇ ಪದವಿಪೂರ್ವ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಲಾಗಿದೆ. ಹಂತಹಂತವಾಗಿ ಪದವಿಪೂರ್ವ ಶಿಕ್ಷಣ ಅಸ್ತಿತ್ವ ಕಳೆದುಕೊಳ್ಳುತ್ತಿದೆ‘ ಎಂದರು. 

ADVERTISEMENT

ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ’ಯಾವುದೇ ಶಿಕ್ಷಣ ನೀತಿಯನ್ನು ಬದಲಿಸುವ ಮೊದಲು ಸಾಕಷ್ಟು ಚರ್ಚೆಗಳು ನಡೆಯಬೇಕು. ವಿಮರ್ಶೆಗೆ ಒಳಪಡಿಸಬೇಕು. ಶಿಕ್ಷಣ ಕ್ಷೇತ್ರದ ಎಲ್ಲ ವಲಯಗಳ ಅಭಿಪ್ರಾಯ ಸಂಗ್ರಹಿಸಬೇಕು. ಈ ಯಾವ ಕೆಲಸಗಳನ್ನೂ ಮಾಡದೆ ರಾಷ್ಟ್ರೀಯ ಶಿಕ್ಷಣ ನೀತಿ–2020ನ್ನು ರೂಪಿಸಲಾಗಿದೆ. ಎನ್‌ಇಪಿಯಿಂದ ಏನೆಲ್ಲಾ ತೊದರೆಯಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ‘ ಎಂದರು.

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಚಿಂತಕರಾದ ಜಿ.ರಾಮಕೃಷ್ಣ, ಶ್ರೀಪಾದ್ ಭಟ್, ಎಚ್.ಎಲ್. ಪುಪ್ಪಾ, ಎಲ್.ಎನ್. ಮುಕುಂದರಾಜ್, ತಿಮ್ಮಯ್ಯ ಪುರ್ಲೆ, ನಂದೀಶ್ ಕುಮಾರ್, ಆರ್.ರಾಜಗೋಪಾಲ್, ಪ್ರವೀಣ್ ಮಹಿಷಿ, ಸಂಧ್ಯಾ ಮೆನೆಂಜೆಸ್, ಗೋಪಾಲಕೃಷ್ಣ, ಎಸ್. ಬೈರೇಗೌಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.