ADVERTISEMENT

ಪಟ್ಟಾ ಭೂಮಿ ಪಡೆದು ಅರಣ್ಯ ವಿಸ್ತರಣೆ: ಸರ್ಕಾರದ ತೀರ್ಮಾನ

ಪರಿಸರ ಸೂಕ್ಷ್ಮ ವಲಯ ಘೋಷಿಸುವ ಹೊಸ ಪ್ರಸ್ತಾವ ಕೇಂದ್ರಕ್ಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 20:43 IST
Last Updated 22 ಫೆಬ್ರುವರಿ 2024, 20:43 IST
<div class="paragraphs"><p>ಮಾನವ– ವನ್ಯಜೀವಿ ಸಂಘರ್ಷ</p></div>

ಮಾನವ– ವನ್ಯಜೀವಿ ಸಂಘರ್ಷ

   

ಬೆಂಗಳೂರು: ಮಾನವ– ವನ್ಯಜೀವಿ ಸಂಘರ್ಷದ ಕಾರಣ ಕೃಷಿ ಮಾಡಲು ಸಾಧ್ಯವಾಗದಿರುವ ಅಥವಾ ವನ್ಯಜೀವಿ ಕಾರಿಡಾರ್‌ ವ್ಯಾಪ್ತಿಯಲ್ಲಿನ ಖಾಸಗಿ ಜಮೀನನ್ನು ರೈತರು ಸ್ವ ಇಚ್ಛೆಯಿಂದ ಸರ್ಕಾರಕ್ಕೆ ಬಿಟ್ಟುಕೊಟ್ಟರೆ, ಸ್ವಾಧೀನಕ್ಕೆ ಪಡೆಯಲು ರಚಿಸಲಾಗಿರುವ ಮಾರ್ಗಸೂಚಿಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಅರಣ್ಯ ವ್ಯಾಪ್ತಿ ಹೆಚ್ಚಿಸಲು ಮತ್ತು ರೈತರ ಅಮೂಲ್ಯ ಬೆಳೆ ಮತ್ತು ಜೀವ ಉಳಿಸಲು ಅರಣ್ಯ ಪ್ರದೇಶಗಳನ್ನು ಒಗ್ಗೂಡಿಸಿ ವನ್ಯಜೀವಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವ ಪ್ರಸ್ತಾವವನ್ನು ಅರಣ್ಯ ಇಲಾಖೆ ಸಂ‍‍‍ಪುಟದ ಮುಂದೆ ತಂದಿತ್ತು. ಅರಣ್ಯ ಪ್ರದೇಶಗಳ ಮಧ್ಯದಲ್ಲಿ, ಅಂಚಿನಲ್ಲಿ ಮತ್ತು ಕಾರಿಡಾರ್‌ ಪ್ರದೇಶಗಳಲ್ಲಿ ಇರುವ ಆದಿವಾಸಿಗಳು, ಪಟ್ಟಾ ಭೂಮಿ ಹೊಂದಿರುವವರು, ರೈತರು ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನನ್ನು ಅರಣ್ಯ ಇಲಾಖೆಗೆ ನೀಡಲು ಮುಂದೆ ಬಂದರೆ ಆ ಭೂಮಿಯನ್ನು ಯಾವ ದರದಲ್ಲಿ ನೀಡಿ ಪಡೆಯಬೇಕು ಎಂಬ ಬಗ್ಗೆ ಈ ಮಾರ್ಗಸೂಚಿ ರಚಿಸಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 2012 ರಲ್ಲಿ ಹೊರಡಿಸಿರುವ ಕ್ರೋಡೀಕೃತ ಮಾರ್ಗಸೂಚಿ ರೀತಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸಿಸುವ ಮತ್ತು ಹೊರಬರಲು ಸಿದ್ಧವಿರುವ ಕುಟುಂಬಗಳಿಗೆ ಪುನರ್‌ ವಸತಿ ಕಲ್ಪಿಸಲು ಪ್ರತಿ ಕುಟುಂಬಕ್ಕೆ ₹15 ಲಕ್ಷ ನೀಡುವ ಕುರಿತಂತೆ ಪ್ರಸ್ತಾವಿಸಲಾಗಿದೆ.

ADVERTISEMENT

ಸಚಿವ ಸಂಪುಟ ಉಪಸಮಿತಿಯ ಶಿಫಾರಸಿನಂತೆ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮ, ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ, ಕಪ್ಪತಗುಡ್ಡ ವನ್ಯಜೀವಿ ಧಾಮ, ಅಣಶಿ ರಾಷ್ಟ್ರೀಯ ಉದ್ಯಾನವನ ಮತ್ತು ದಾಂಡೇಲಿ ವನ್ಯಜೀವಿಧಾಮ ಹಾಗೂ ಕಾವೇರಿ ವಿಸ್ತರಿತ ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಹೊಸ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಲು ಅನುಮೋದನೆ ನೀಡಿದೆ.

ಈ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್‌ ತೀರ್ಪು, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ 2011 ರ ಫೆಬ್ರುವರಿ 9 ರಂದು ಹೊರಡಿಸಿರುವ ಮಾರ್ಗಸೂಚಿ ಅನ್ವಯ ರೂಪಿಸಲಾಗಿದೆ. ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.