ADVERTISEMENT

ನಕಲಿ ನೇಮಕಾತಿ ಆದೇಶ: ಸಮಾಜ ಕಲ್ಯಾಣ ಆಯುಕ್ತರಿಂದ ದೂರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 15:52 IST
Last Updated 23 ಏಪ್ರಿಲ್ 2022, 15:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಹೆಸರಿನಲ್ಲಿ ‘ಡಿ’ ದರ್ಜೆ ನೌಕರರ ನಕಲಿ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿರುವುದು ಪತ್ತೆಯಾಗಿದ್ದು, ಈ ಕುರಿತು ಇಲಾಖೆಯ ಆಯುಕ್ತ ದಯಾನಂದ ಕೆ.ಎ. ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಡಿ’ ದರ್ಜೆ ನೌಕರರ ನೇಮಕಾತಿಗೆ ವಿಶೇಷ ‍ಪ್ರಕ್ರಿಯೆ ನಡೆಸಲಾಗಿದೆ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ದುಷ್ಕರ್ಮಿಗಳು, ರಾಜ್ಯ ಸರ್ಕಾರದ ಲಾಂಛನ ಬಳಸಿಕೊಂಡು ಆದೇಶ ಪತ್ರಗಳನ್ನು ಮುದ್ರಿಸಿದ್ದಾರೆ. ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂಬ ಉಲ್ಲೇಖದೊಂದಿಗೆ ಈ ಆದೇಶದ ಪ್ರತಿಗಳನ್ನು ಕೆಲವರಿಗೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚನ್ನಸಮುದ್ರ ಗ್ರಾಮದ ಪ್ರಮೋದ್‌ ಸಿ.ಟಿ. ಎಂಬುವವರಿಗೆ ಈ ರೀತಿಯ ನಕಲಿ ನೇಮಕಾತಿ ಆದೇಶ ನೀಡಲಾಗಿತ್ತು. ವಿಧಾನಸೌಧದ ಪಕ್ಕದ ಬಹುಮಹಡಿಗಳ ಕಟ್ಟಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಹುದ್ದೆ ನೀಡಲಾಗಿದೆ ಎಂಬ ಉಲ್ಲೇಖ ಅದರಲ್ಲಿದೆ.

ADVERTISEMENT

‘ಸಮಾಜಘಾತುಕ ಶಕ್ತಿಗಳು ಇಲಾಖೆಯ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿವೆ. ಇಲಾಖೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ನೇಮಕಾತಿ ಆದೇಶ ನೀಡಿರುವವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಏಪ್ರಿಲ್‌ 19ರಂದು ವಿಧಾನಸೌಧ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.