ADVERTISEMENT

ಉಪರಾಷ್ಟ್ರಪತಿ ಕಾರ್ಯದರ್ಶಿ ಹೆಸರಿನಲ್ಲಿ ಕರೆ: ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 18:10 IST
Last Updated 12 ಜುಲೈ 2020, 18:10 IST
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು    

ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕಾರ್ಯದರ್ಶಿ ಹೆಸರಿನಲ್ಲಿ ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಪ್ತ ಕಾರ್ಯದರ್ಶಿ ಕಚೇರಿಗೆ ಕರೆ ಮಾಡಿ ವಂಚಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೈಕೋರ್ಟ್ ವಿಚಕ್ಷಣಾ ದಳದ ಎಸಿಪಿ ಎಸ್‌.ಎನ್. ಪ್ರೇಮಸಾಯಿ ಗುಡ್ಡಪ್ಪ ರೈ ದೂರು ನೀಡಿದ್ದಾರೆ. ಕೃತ್ಯ ಎಸಗಿದ್ದಾನೆ ಎನ್ನಲಾದ ಸುಜನ್ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಸೈಬರ್ ಪೊಲೀಸರು ಹೇಳಿದರು.

‘ಪ್ರಕರಣವೊಂದರ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಅದೇ ಪ್ರಕರಣ ಸಂಬಂಧ ಮಾತನಾಡಬೇಕೆಂದು ನ್ಯಾಯಮೂರ್ತಿ ಅವರ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿದ್ದ ಆರೋಪಿ, ‘ನಾನು ಉಪರಾಷ್ಟ್ರಪತಿ ಕಾರ್ಯದರ್ಶಿ ಐ.ವಿ. ಸುಬ್ಬರಾವ್’ ಎಂದು ಪರಿಚಯಿಸಿಕೊಂಡಿದ್ದ. ‘ಉಪರಾಷ್ಟ್ರಪತಿಯವರ ಮಗನ ಸ್ನೇಹಿತನ ಪ್ರಕರಣ ನಿಮ್ಮ ನ್ಯಾಯಾಲಯದಲ್ಲಿದೆ. ಆ ಬಗ್ಗೆ ಮುಖ್ಯನ್ಯಾಯಮೂರ್ತಿ ಜೊತೆ ಮಾತನಾಡಬೇಕು. ಅವರಿಗೆ ನನ್ನ ದೂರವಾಣಿ ನಂಬರ್ ಕೊಡಿ’ ಎಂದು ಹೇಳಿದ್ದ. ಮೂರು ಬೇರೆ ಬೇರೆ ನಂಬರ್‌ಗಳನ್ನೂ ನೀಡಿದ್ದ.’

ADVERTISEMENT

‘ಆಪ್ತ ಕಾರ್ಯದರ್ಶಿ ಕರೆ ಬಗ್ಗೆ ಉಪ ರಾಷ್ಟ್ರಪತಿ ಕಾರ್ಯದರ್ಶಿ ಕಚೇರಿಯನ್ನು ವಿಚಾರಿಸಿದ್ದರು. ಅವರು ಕರೆ ಮಾಡಿಲ್ಲವೆಂಬುದು ಗೊತ್ತಾಗಿತ್ತು. ಇದೊಂದು ವಂಚನೆ ಕರೆ ಎಂಬುದನ್ನು ಅರಿತ ಆಪ್ತ ಕಾರ್ಯದರ್ಶಿ, ಕರೆ ಮಾಡಿದವರನ್ನು ಪತ್ತೆ ಮಾಡುವಂತೆ ಹೈಕೋರ್ಟ್ ವಿಚಕ್ಷಣಾ ದಳಕ್ಕೆ ಮನವಿ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ತನಿಖೆ ನಡೆಸಿದಾಗ ಆರೋಪಿ ಸುಜನ್ ಅಂತರ್ಜಾಲದ ಮೂಲಕ ಕರೆ ಮಾಡಿ ವಂಚಿಸಿರುವುದು ಗೊತ್ತಾಗಿದೆ. ಅದರ ವರದಿ ಸಮೇತ ಎಸಿಪಿ ಅವರು ಠಾಣೆಗೆ ದೂರು ನೀಡಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.