ADVERTISEMENT

ಗಾಂಜಾ ಸೇದಿಸಿದ್ದ ಇನ್‌ಸ್ಪೆಕ್ಟರ್, ಪಿಎಸ್‌ಐ ಅಮಾನತು

* ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ; ಆತ್ಮಹತ್ಯೆಗೆ ಯತ್ನಿಸಿದ್ದ ಶಿವರಾಜ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:14 IST
Last Updated 22 ಜುಲೈ 2021, 20:14 IST
ಪಾರ್ವತಮ್ಮ
ಪಾರ್ವತಮ್ಮ   

ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಂಡು ಕಿರುಕುಳ ನೀಡಿ ಕರ್ತವ್ಯಲೋಪ ಎಸಗಿದ ಆರೋಪದಡಿ ಆರ್‌.ಎಂ.ಸಿ. ಯಾರ್ಡ್ ಠಾಣೆ ಇನ್‌ಸ್ಪೆಕ್ಟರ್ ಎಸ್. ಪಾರ್ವತಮ್ಮ ಹಾಗೂ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಆಂಜನಪ್ಪ ಸೇರಿ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಯಶವಂತಪುರ ನಿವಾಸಿ ಶಿವರಾಜ್ ಎಂಬುವರ ಮೇಲೆ ಗಾಂಜಾ ಸೇವಿಸಿದ್ದ ಬಗ್ಗೆ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು. ನೊಂದ ಶಿವರಾಜ್, ವಿಷ ಕುಡಿದು ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ವಿಡಿಯೊ ಹರಿಬಿಟ್ಟಿದ್ದ ಶಿವರಾಜ್, ‘ಆರ್‌.ಎಂ.ಸಿ. ಯಾರ್ಡ್ ಪೊಲೀಸರು ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿದ್ದರು.

ವಿಡಿಯೊ ಗಮನಿಸಿದ್ದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ, ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಯಶವಂತಪುರ ಉಪವಿಭಾಗದ ಎಸಿಪಿ ಅವರಿಗೆ ಸೂಚಿಸಿದ್ದರು. ವಿಚಾರಣೆ ನಡೆಸಿ ಪುರಾವೆಗಳ ಸಮೇತ ಎಸಿಪಿ ವರದಿ ನೀಡಿದ್ದರು. ಅದೇ ವರದಿಯನ್ನು ಡಿಸಿಪಿ, ಕಮಿಷನರ್ ಕಮಲ್ ಪಂತ್ ಅವರಿಗೆ ಕಳುಹಿಸಿದ್ದರು.

ADVERTISEMENT

ವರದಿ ಪರಿಶೀಲಿಸಿದ್ದ ಕಮಲ್ ಪಂತ್, ಇನ್‌ಸ್ಪೆಕ್ಟರ್ ಪಾರ್ವತಮ್ಮ, ಪಿಎಸ್‌ಐ ಆಂಜನಪ್ಪ ಹಾಗೂ ಕಾನ್‌ಸ್ಟೆಬಲ್ ಉಮೇಶ್‌ ಅವರನ್ನು ಅಮಾನತು ಮಾಡಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಪ್ರಕರಣ ವಿವರ: ‘ತರಕಾರಿ ವ್ಯಾಪಾರಿ ಆಗಿದ್ದ ಶಿವರಾಜ್, ಮೊಬೈಲ್ ನೋಡುತ್ತ ಜುಲೈ 14ರಂದು ರಾತ್ರಿ ಮನೆ ಮುಂದೆ ಕುಳಿತಿದ್ದರು. ಗಸ್ತಿನಲ್ಲಿದ್ದ ಇನ್‌ಸ್ಪೆಕ್ಟರ್, ಗಾಂಜಾ ಸೇದುತ್ತಿದ್ದ ಆರೋಪ ಹೂರಿಸಿ ಶಿವರಾಜ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪಿಎಸ್‌ಐ ಆಂಜನಪ್ಪ ಅವರಿಗೆ ಹೇಳಿದ್ದರು’ ಎಂದು ಮೂಲಗಳು ಹೇಳಿವೆ.

‘ಶಿವರಾಜ್ ಯಾವುದೇ ಗಾಂಜಾ ಸೇದಿರಲಿಲ್ಲ. ಪ್ರಕರಣ ದಾಖಲಿಸಲು ಪುರಾವೆ ಇರಲಿಲ್ಲ. ಅಷ್ಟಕ್ಕೆ ಸುಮ್ಮನಾಗದ ಪಿಎಸ್‌ಐ, ಸಿಗರೇಟ್‌ನಲ್ಲಿ ಗಾಂಜಾ ತುಂಬಿಕೊಟ್ಟು ಸೇದುವಂತೆ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಕಿರುಕುಳ ನೀಡಿ ಒತ್ತಾಯದಿಂದ ಗಾಂಜಾ ಸೇದುವಂತೆ ಮಾಡಿದ್ದರು ಎನ್ನಲಾಗಿದೆ. ನಂತರ, ವೈದ್ಯಕೀಯ ಪರೀಕ್ಷೆ ನಡೆಸಿ ದಂಡ ವಿಧಿಸಿ ಶಿವರಾಜ್‌ ಅವರನ್ನು ಮನೆಗೆ ಕಳುಹಿಸಿದ್ದರು’ ಎಂದೂ ಮೂಲಗಳು ಹೇಳಿವೆ.

‘ಪ್ರಕರಣ ದಾಖಲಿಸಿರುವ ವಿಷಯ, ಅಕ್ಕ–ಪಕ್ಕದ ನಿವಾಸಿಗಳಿಗೆ ಗೊತ್ತಾಗಿತ್ತು. ಶಿವರಾಜ್ ಅವರನ್ನು ಮಾತನಾಡಿಸಿದ್ದ ಸ್ಥಳೀಯರು, ‘ಏನಪ್ಪ ಗಾಂಜಾ ಸೇದಿ ಜೈಲಿಗೆ ಹೋಗಿ ಬಂದಿಯಾ’ ಎನ್ನಲಾರಂಭಿಸಿದ್ದರು. ಅದರಿಂದ ಶಿವರಾಜ್ ನೊಂದಿದ್ದರು. ತಮ್ಮ ಮೇಲೆ ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸಿದ್ದರಿಂದ ನೊಂದ ಶಿವರಾಜ್, ಆತ್ಮಹತ್ಯೆಗೆ ಯತ್ನಿಸಿದ್ದರು. ಕುಟುಂಬಸ್ಥರೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಡಿಸಿಪಿ ವಿರುದ್ಧವೇ ರಹಸ್ಯ ಕಾರ್ಯಾಚರಣೆ ನಡೆಸಿದ್ದ ಪಿಎಸ್‌ಐ

ಆರೋಪದ ಬಗ್ಗೆ ವಿಚಾರಿಸಲು ಪಿಎಸ್‌ಐ ಆಂಜನಪ್ಪ ಅವರನ್ನು ಡಿಸಿಪಿ ಧರ್ಮೇಂದ್ರಕುಮಾರ್ ಅವರು ತಮ್ಮ ಕಚೇರಿಗೆ ಕರೆಸಿದ್ದರು. ಡಿಸಿಪಿ ಹಾಗೂ ತಮ್ಮ ನಡುವಿನ ಮಾತುಕತೆಯನ್ನು ಪಿಎಸ್‌ಐ, ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಲಾರಂಭಿಸಿದ್ದರು. ಕೆಲ ಬಾರಿ ಅನುಮಾನಾಸ್ಪದವಾಗಿ ಪ್ಯಾಂಟ್‌ನ ಜೇಬಿನಲ್ಲಿದ್ದ ಮೊಬೈಲ್‌ ಒತ್ತುತ್ತಿದ್ದರು. ಅದನ್ನು ಗಮನಿಸಿದ್ದ ಡಿಸಿಪಿ, ಕಚೇರಿ ಸಿಬ್ಬಂದಿಯನ್ನು ಕರೆಸಿ ಜೇಬಿನಲ್ಲಿ ಪರಿಶೀಲನೆ ನಡೆಸಿದ್ದರು. ಅದೇ ವೇಳೆಯೇ ಪಿಎಸ್ಐ ನಡೆಸುತ್ತಿದ್ದ ರಹಸ್ಯ ಕಾರ್ಯಾಚರಣೆ ಬಯಲಾಗಿದೆ. ಈ ಸಂಗತಿಯನ್ನೂ ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ರೆಕಾರ್ಡ್ ಮಾಡಿದ್ದ ಆಡಿಯೊ ಇಟ್ಟುಕೊಂಡು ಡಿಸಿಪಿ ಅವರನ್ನೇ ಬೆದರಿಸುವ ಉದ್ದೇಶ ಪಿಎಸ್‌ಐ ಅವರದ್ದಾಗಿತ್ತು’ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.