ADVERTISEMENT

ಸುಳ್ಳು ಸುದ್ದಿ ವ್ಯಾಖ್ಯಾನಕ್ಕೆ ಆಗ್ರಹ: ಜನಾಂದೋಲನದಿಂದ ಸರ್ಕಾರಕ್ಕೆ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 16:12 IST
Last Updated 3 ಆಗಸ್ಟ್ 2025, 16:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರವು ತರಲು ಹೊರಟಿರುವ ಕಾನೂನುಗಳಲ್ಲಿ, ಸುಳ್ಳು ಸುದ್ದಿ ಅಂದರೆ ಏನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿಯೇ ಇಲ್ಲ’ ಎಂದು ಆಲ್ಟರ್ನೇಟಿವ್ ಲಾ ಫೋರಂ ಮತ್ತು ದ್ವೇಷ ಭಾಷಣದ ವಿರುದ್ಧ ಜನಾಂದೋಲನವು ಕಳವಳ ವ್ಯಕ್ತಪಡಿಸಿವೆ.

ದ್ವೇಷ ಭಾಷಣದ ವಿರುದ್ಧ ಜನಾಂದೋಲನವು ಈ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜ್ಯದ ಎಲ್ಲ ಶಾಸಕರಿಗೆ ಬಹಿರಂಗ ಪತ್ರ ಬರೆದಿದೆ.

ADVERTISEMENT

‘ರಾಜ್ಯ ಸರ್ಕಾರವು ಸಿದ್ದಪಡಿಸಿರುವ ‘ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ (ನಿಷೇಧ) ಮಸೂದೆ–2025’ ಮತ್ತು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧ (ನಿಷೇಧ) ಮಸೂದೆ–2025’ರ ಕರಡುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಕರಡುಗಳನ್ನು ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿಯೇ ಇಲ್ಲ. ಈ ಮೂಲಕ ಸಾರ್ವಜನಿಕ ಆಕ್ಷೇಪಗಳಿಂದ ಮಸೂದೆಗಳನ್ನು ದೂರವಿಟ್ಟಂತಾಗಿದೆ’ ಎಂದು ಪತ್ರದಲ್ಲಿ ಅಭಿಪ್ರಾಯಪಡಲಾಗಿದೆ.

‘ಈ ರೀತಿಯ ಕಾನೂನುಗಳನ್ನು ತರಾತುರಿಯಲ್ಲಿ ಜಾರಿಗೆ ತಂದ ಫಿಲಿಪ್ಪೀನ್ಸ್‌, ಜರ್ಮನಿ, ಮಲೇಷ್ಯಾ ಮತ್ತು ನೈಜೀರಿಯಾಗಳಲ್ಲಿ, ಕಾನೂನುಗಳಿಂದ ಅನನುಕೂಲವೇ ಆಗಿದೆ. ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.

‘ಈ ಮಸೂದೆಗಳಲ್ಲಿ ಸುಳ್ಳು ಸುದ್ದಿ, ತಪ್ಪು ಮಾಹಿತಿ, ದ್ವೇಷ ಭಾಷಣ ಮತ್ತು ದ್ವೇಷಾಪರಾಧ ಅಂದರೆ ಏನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ. ಈ ಮಸೂದೆಗಳು ಕಾಯ್ದೆಯಾಗಿ ಜಾರಿಯಾದರೆ, ಅದು ಆಳುವ ಪಕ್ಷದ ದಮನದ ಸಾಧನವಾಗಿ ಬಳಕೆಯಾಗಬಹುದು ಮತ್ತು ಸರ್ಕಾರಿ ಅಧಿಕಾರಿಗಳಿಂದ ದುರ್ಬಳಕೆಯಾಗಬಹುದು. ಈ ಬಗ್ಗೆ ಸರ್ಕಾರ ಮತ್ತು ಎಲ್ಲ ಶಾಸಕರು ಗಮನ ಹರಿಸುವ ಅವಶ್ಯಕತೆ ಇದೆ’ ಎಂದು ಆಲ್ಟರ್ನೇಟಿವ್ ಲಾ ಫೋರಂನ ಸಂಶೋಧಕಿ ಮಮತಾ ಹೇಳಿದ್ದಾರೆ.

ಆಲ್ಟರ್ನೇಟಿವ್ ಲಾ ಫೋರಂನ ಮಾನವಿ ಅತ್ರಿ ಅವರು ಸುಳ್ಳು ಸುದ್ದಿ, ದ್ವೇಷ ಭಾಷಣಗಳ ಸ್ವರೂಪ ಮತ್ತು ನಿಷೇಧ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ‘ಸರ್ಕಾರವು ಈ ಸಮೂದೆಗಳನ್ನು ತಕ್ಷಣವೇ ಹಿಂಪಡೆಯಬೇಕು. ನಾಗರಿಕರು, ವಿಷಯ ತಜ್ಞರನ್ನು ಒಳಗೊಂಡು ಹೊಸದಾಗಿ ಕರಡು ರೂಪಿಸಬೇಕು. ಮಸೂದೆಗಳು ದುರ್ಬಳಕೆ ಆಗಲು ಇರುವಂತಹ ಅವಕಾಶಗಳನ್ನು ತೆಗೆದುಹಾಕಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.