ADVERTISEMENT

ಮತ ಕಳ್ಳತನ ಆರೋಪ: ಶಾಸಕ ರಿಜ್ವಾನ್ ಅರ್ಜಿ ವಿಚಾರಣೆ 19ಕ್ಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 23:46 IST
Last Updated 12 ಸೆಪ್ಟೆಂಬರ್ 2025, 23:46 IST
ರಿಜ್ವಾನ್‌ ಅರ್ಷದ್‌
ರಿಜ್ವಾನ್‌ ಅರ್ಷದ್‌   

ಬೆಂಗಳೂರು: ‘ಮತದಾರರ ನಕಲಿ ಯಾದಿ ತಯಾರು ಮಾಡುತ್ತಿದ್ದಾರೆ’ ಎಂದು ತಮ್ಮ ವಿರುದ್ಧ ಬಿಜೆಪಿ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಶಿವಾಜಿನಗರದ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೇ 19ಕ್ಕೆ ಮುಂದೂಡಿದೆ.

ಈ ಪ್ರಕರಣವನ್ನು 'ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್ ಶುಕ್ರವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ರಿಜ್ವಾನ್‌ ಪರ ಹೈಕೋರ್ಟ್‌ ವಕೀಲ ಸೂರ್ಯ ಮುಕುಂದರಾಜ್‌ ಮತ್ತು ಸಂಜಯ್ ಯಾದವ್‌, ಅರ್ಜಿದಾರರನ್ನು ಪಾಟಿ ಸವಾಲಿಗೆ ಒಳಪಡಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿವಾದಿ ಬಿಜೆಪಿ ಪರ ಹಾಜರಾಗಿದ್ದ ಹಿರಿಯ ವಕೀಲ ಚಲಪತಿ ಶ್ರೀನಿವಾಸ್ ಮತ್ತು ಎನ್‌.ಗೋಪಿ ಸಮಯಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಪ್ರಕರಣವನ್ನು ಅರ್ಜಿದಾರರ ಪಾಟೀ ಸವಾಲಿನ ಪ್ರಕ್ರಿಯೆಗೆ ನಿಗದಿಪಡಿಸಿ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದರು.

ಪ್ರಕರಣವೇನು?: ರಿಜ್ವಾನ್‌ ಅರ್ಷದ್‌ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ (ಸೆಂಟ್ರಲ್‌) ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಅವರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹಿಂ ಖಲೀಲುಲ್ಲಾ ಅವರನ್ನು ಬಿಜೆಪಿ ಮಾಡಿದ್ದ ಆರೋಪದಡಿ ಬಂಧಿಸಲಾಗಿತ್ತು. 

‘ಇಬ್ರಾಹಿಂ ಖಲೀಲುಲ್ಲಾ ಅವರು ರಿಜ್ವಾನ್‌ ಅರ್ಷದ್‌ ಪರ ಪ್ರಭಾತ್‌ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯ ಕೊಠಡಿ ಸಂಖ್ಯೆ 507ರಲ್ಲಿ ನಕಲಿ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸುತ್ತಿದ್ದಾರೆ’ ಎಂದು ಆರೋಪಿಸಲಾಗಿತ್ತು. ಈ ಕುರಿತು ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬಿತ್ತರಿಸಿ, ‘ರಿಜ್ವಾನ್‌ ಅರ್ಷದ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿತ್ತು.

ಇದರ ವಿರುದ್ಧ ರಿಜ್ವಾನ್‌ ಅರ್ಷದ್ ಖಾಸಗಿ ದೂರು ದಾಖಲಿಸಿದ್ದಾರೆ. ಈ ಖಾಸಗಿ ದೂರಿನಲ್ಲಿ ಬಿಜೆಪಿಯ ರಾಜ್ಯ ಘಟಕದ ಅಂದಿನ ಅಧ್ಯಕ್ಷರು ಹಾಗೂ ಐ.ಟಿ ಸೆಲ್‌ ವಿಭಾಗದ ಅಧ್ಯಕ್ಷರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.