
ಬೆಂಗಳೂರು: ‘ನಾನು ಪ್ರತಿನಿಧಿಸುತ್ತಿರುವ ಗಾಂಧಿನಗರ ಕ್ಷೇತ್ರದಲ್ಲಿ 11,200 ನಕಲಿ ಮತದಾರರಿದ್ದಾರೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ‘ಮತ ಕಳವು’ ಮಾಡುತ್ತಿದೆ ಎಂದು ಆರೋಪಿಸಿ ಹಮ್ಮಿಕೊಂಡಿರುವ ‘ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನ’ಕ್ಕೆ ಸನ್ ರೈಸ್ ವೃತ್ತದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಚಿಕ್ಕಪೇಟೆಯ ವಾರ್ಡ್ ಒಂದರಲ್ಲಿ ಸಾವಿರಾರು ನಕಲಿ ಮತದಾರರನ್ನು ನಮ್ಮ ಪಕ್ಷದ ಕಾರ್ಯಕರ್ತರು ಗುರುತಿಸಿದ್ದಾರೆ. ನಕಲಿ ಮತದಾರರ ಪಟ್ಟಿಯನ್ನು ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರೂ ಯಾವುದೇ ಕ್ರಮ ಆಗಿಲ್ಲ. ನಕಲಿ ಮತಗಳನ್ನು ತೆಗೆದುಹಾಕುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಮೀನಮೇಷ ಎಣಿಸುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದರು.
‘ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರನ್ನು ಸೃಷ್ಟಿಸಲಾಗಿದೆ. ಮತ ಕಳವು ನಡೆಯದಿದ್ದರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚುನಾಯಿತರಾಗುತ್ತಿದ್ದರು’ ಎಂದರು.
‘ಮತ ಕಳವು ನಡೆಯುತ್ತಿರುವುದನ್ನು ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಈಗಾಗಲೇ ದೇಶದ ಜನರ ಮುಂದೆ ದಾಖಲೆ ಸಮೇತ ತೆರೆದಿಟ್ಟಿದ್ದಾರೆ. ಇಡೀ ದೇಶವೇ ಆಂತಕಪಡುವ ವಿಷಯವಿದು. ಪ್ರಜಾಪ್ರಭುತ್ವದ ಕಗ್ಗೊಲೆ. ಚುನಾವಣಾ ಆಯೋಗವನ್ನು ಕೈಗೊಂಬೆಯಾಗಿಸಿಕೊಂಡು, ಇಲ್ಲದೆ ಇರುವ ಮತದಾರರನ್ನು ಸೃಷ್ಟಿಸಿ, ಸಾಂವಿಧಾನಿಕ ಮೌಲ್ಯಗಳನ್ನು ಮೂಲೆಗುಂಪು ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಶೋಚನೀಯ ಸಂಗತಿ’ ಎಂದರು.
‘ಚುನಾವಣಾ ಆಯೋಗದಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಿದ್ರೆ ಮಾಡುತ್ತಿರುವ ಅಧಿಕಾರಿಗಳನ್ನು ಎಚ್ಚರಿಸುವ ಉದ್ದೇಶದಿಂದ ನಾವು ಈ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ. ದೇಶದಾದ್ಯಂತ ಈ ಅಭಿಯಾನ ನಡೆಯುತ್ತಿದ್ದು, ಗಾಂಧಿನಗರ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ’ ಎಂದರು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಕಾಂಗ್ರೆಸ್ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.