ADVERTISEMENT

ಸುಳ್ಳು ಸುದ್ದಿ ಹಬ್ಬಿಸುವ ಎಚ್‌ಡಿಕೆ: ನಳಿನ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 15:51 IST
Last Updated 2 ಜನವರಿ 2023, 15:51 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌   

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಕರ್ನಾಟಕ ಭೇಟಿಯ ಬಳಿಕ ಜೆಡಿಎಸ್‌ಗೆ ಹಳೇ ಮೈಸೂರು ಭಾಗದಲ್ಲೂ ಸಂಪೂರ್ಣ ನೆಲಕಚ್ಚುವ ಭೀತಿ ಉಂಟಾಗಿದ್ದು, ಈ ಕಾರಣಕ್ಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹರಿಹಾಯ್ದಿದ್ದಾರೆ.

‘ಅಮೂಲ್–ಕೆಎಂಎಫ್‌ (ನಂದಿನಿ) ಜೊತೆ ವಿಲೀನ ಇಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ರಾಜ್ಯ ಸಹಕಾರ ಸಚಿವರು ಈಗಾಗಲೇ ತಿಳಿಸಿದ್ದಾರೆ. ಪರಸ್ಪರ ಸಹಕಾರದೊಂದಿಗೆ, ಉತ್ತಮ ಅಂಶಗಳನ್ನು ಹಂಚಿಕೊಂಡು ಬೆಳೆಯಬೇಕೆಂಬ ಆಶಯವನ್ನು ಅಮಿತ್‌ ಶಾ ಅವರು ವ್ಯಕ್ತಪಡಿಸಿದ್ದರು. ಆದರೆ, ಕಣ್ಣೀರಿನ ಕುಮಾರಸ್ವಾಮಿಯವರು ಕಾಮಾಲೆ ರೋಗದವರಂತೆ ಎಲ್ಲೆಡೆ ಹಳದಿ ಕಂಡಂತೆ ಭ್ರಮಿಸಿ ಮಾತನಾಡಲು ಆರಂಭಿಸಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಹೊಂದಾಣಿಕೆ ರಾಜಕೀಯದಲ್ಲಿ ನಿಸ್ಸೀಮರಾದ ಕುಮಾರಸ್ವಾಮಿ ಅವರಿಗೆ ಹಳೆ ಮೈಸೂರು ಭಾಗದಲ್ಲಿ ಸೋಲುವ ಭೀತಿ ಹೆಚ್ಚಾಗಿದೆ. ಮಂಡ್ಯದಲ್ಲಿ ಅಮಿತ್‌ ಶಾ ಅವರ ಸಮಾವೇಶದ ಯಶಸ್ಸು, ಬೆಂಗಳೂರಿನ ಸಮಾವೇಶಕ್ಕೆ ಅಪಾರ ಜನರು ಬಂದಿರುವುದನ್ನು ಗಮನಿಸಿ ಅವರ ಆತಂಕ ಹೆಚ್ಚಿದೆ. ಅದೇ ಕಾರಣಕ್ಕೆ ಅವರು ಬುದ್ಧಿ ಭ್ರಮಣೆಗೆ ಒಳಗಾದವರಂತೆ ಮಾತನಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಜೆಡಿಎಸ್‌ ಪಕ್ಷವು ಮಂಡ್ಯ, ಮೈಸೂರು, ಹಾಸನ ಸೇರಿ ಹಳೇ ಮೈಸೂರು ಭಾಗದಲ್ಲಿ ಸೊರಗುತ್ತಿದೆ. ಇದರಿಂದ ವಿಚಲಿತರಾದ ಕುಮಾರಸ್ವಾಮಿ ಸುಳ್ಳು ಸುದ್ದಿ ಹಬ್ಬಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ. ಅವರಿಗೆ ಚುನಾವಣೆ ಬಂದಾಗ ಮಾತ್ರ ಕನ್ನಡಾಭಿಮಾನ ಉಕ್ಕಿ ಹರಿಯುತ್ತದೆ. ನೆಲ–ಜಲದ ಕುರಿತು ಅವರು ಮೊಸಳೆ ಕಣ್ಣೀರು ಹಾಕುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.