ADVERTISEMENT

ಕೌಟುಂಬಿಕ ವ್ಯಾಜ್ಯಗಳಲ್ಲಿ ಜೀವನಾಂಶ ಅರ್ಜಿ ವಿಲೇವಾರಿಗೆ ಕಾಲಮಿತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 21:52 IST
Last Updated 10 ಫೆಬ್ರುವರಿ 2023, 21:52 IST
   

ಬೆಂಗಳೂರು: ಕೌಟುಂಬಿಕ ವ್ಯಾಜ್ಯಗಳಲ್ಲಿ ಹಿಂದೂ ವಿವಾಹ ಕಾಯ್ದೆಯ ಕಲಂ 24ರ ಅನುಸಾರ ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ವಿಲೇವಾರಿ ಮಾಡಲು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಕಾಲಮಿತಿ ನಿಗದಿಪಡಿಸಿದೆ.

ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಗೆ ಪ್ರತಿ ತಿಂಗಳೂ ₹ 15 ಸಾವಿರ ಮಧ್ಯಂತರ ಜೀವನಾಂಶ ಹಾಗೂ ವ್ಯಾಜ್ಯದ ವೆಚ್ಚ ₹ 50 ಸಾವಿರ ಪಾವತಿಸು ವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಪತಿಗೆ ಆದೇಶಿಸಿತ್ತು. ಈ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಮಹಿಳೆ ಸಲ್ಲಿಸಿದ್ದ ಅರ್ಜಿಗೆ ಪತಿ 19 ತಿಂಗಳ ಬಳಿಕ ಆಕ್ಷೇಪಣೆ ಸಲ್ಲಿಸಿರುವುದು ಹಾಗೂ ತದನಂತರದ 11 ತಿಂಗಳ ಬಳಿಕ ಕೌಟುಂಬಿಕ ನ್ಯಾಯಾಲಯ ಅರ್ಜಿ ಕುರಿತು ತೀರ್ಮಾನ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರತಿ ತಿಂಗಳ ₹ 15 ಸಾವಿರ ಜೀವನಾಂಶವನ್ನು ₹ 50 ಸಾವಿರಕ್ಕೆ ಹಾಗೂ ವ್ಯಾಜ್ಯದ ವೆಚ್ಚವನ್ನು ₹ 1 ಲಕ್ಷಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ.

ADVERTISEMENT

‘ಇಂತಹ ವಿಳಂಬದಿಂದ ಜೀವ ನಾಂಶ ಕೋರಿ ಸಲ್ಲಿಸುವ ಅರ್ಜಿಗಳ ಉದ್ದೇಶವೇ ನಿರರ್ಥಕವಾಗಲಿದೆ. ಜೀವನಾಂಶ ಕೋರಿದ ಅರ್ಜಿಗಳ ಕುರಿತು ನಿರ್ಧಾರ ಕೈಗೊಳ್ಳಲು ವಿಚಾರಣಾ ನ್ಯಾಯಾಲಯಗಳಿಗೆ ಕಾಲಮಿತಿ ನಿಗದಿಪಡಿಸಿದೆ. ‘ವಿಚಾರಣಾ ನ್ಯಾಯಾಲಯಗಳು ಕಾಲಮಿತಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ಆದೇಶವನ್ನು ಜೀವನಾಂಶ ಅರ್ಜಿ ವಿಚಾರಣೆ ನಡೆಸುವ ಎಲ್ಲ ನ್ಯಾಯಾಂಗ ಅಧಿಕಾರಿಗಳಿಗೂ ರವಾನಿಸಬೇಕು’ ಎಂದು ಹೈಕೋರ್ಟ್‌ ರಿಜಿಸ್ಟ್ರಿಗೆ ನಿರ್ದೇಶಿಸಿದೆ.

ಕಾಲಮಿತಿಯ ಮುಖ್ಯಾಂಶಗಳು

l ಅರ್ಜಿ ಸಲ್ಲಿಕೆಯಾದ ತಕ್ಷಣವೇ ನೋಟಿಸ್ ಜಾರಿಗೊಳಿಸಬೇಕು. ಇ-ಮೇಲ್, ವಾಟ್ಸ್‌ ಆ್ಯಪ್ ಮೂಲಕ ನೀಡುವ ನೋಟಿಸ್‌ಗಳೂ ಕಾನೂನಿನ ದೃಷ್ಟಿಯಲ್ಲಿ ಮಾನ್ಯತೆ ಹೊಂದಿವೆ.

l ಹಿಂದೂ ವಿವಾಹ ಕಾಯ್ದೆ–1955ರ ಕಲಂ 24ರ ಅನುಸಾರ ಮಧ್ಯಂತರ ಜೀವನಾಂಶ ಕೋರಿ ಪತ್ನಿ ಸಲ್ಲಿಸುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಂಬಂಧಿಸಿದ ನ್ಯಾಯಾಲಯವು ಪತಿಗೆ 2 ತಿಂಗಳ ಕಾಲಾವಕಾಶ ನೀಡಬೇಕು.

l ಅರ್ಜಿ ಸಲ್ಲಿಸುವ ಪತ್ನಿಗೂ ಆಸ್ತಿ ಮತ್ತು ಹೊಣೆಗಾರಿಕೆಗಳ ಕುರಿತು ಮಾಹಿತಿ ನೀಡಲು 2 ತಿಂಗಳ ಕಾಲಾವಕಾಶ ನೀಡಬೇಕು.

l ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಮಾಹಿತಿಯನ್ನು ಪತ್ನಿ ಸಲ್ಲಿಸಿದ ಬಳಿಕ ನ್ಯಾಯಾಲಯ ಎಲ್ಲ ಪಕ್ಷಗಾರರ ವಾದ ಆಲಿಸಿ, 4 ತಿಂಗಳ ಒಳಗೆ ಆದೇಶ ಹೊರಡಿಸಬೇಕು.

l ಮಧ್ಯಂತರ ಪರಿಹಾರ ಕೋರಿ ಅರ್ಜಿ ಸಲ್ಲಿಕೆಯಾದ ದಿನಾಂಕದಿಂದ ಒಟ್ಟಾರೆ 6 ತಿಂಗಳ ಕಾಲಮಿತಿಯೊಳಗೆ ಅರ್ಜಿ ಕುರಿತು ತೀರ್ಮಾನ ಕೈಗೊಳ್ಳಬೇಕು.

l ಈ ಕಾಲಮಿತಿಯನ್ನು ಪೂರೈಸಲು ಸಂಬಂಧಿಸಿದ ನ್ಯಾಯಾಲಯಗಳು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಅನಗತ್ಯವಾಗಿ ವಿಚಾರಣೆ ಮುಂದೂಡುವುದನ್ನು ತಪ್ಪಿಸಬೇಕು.

l ವಿಚಾರಣಾ ಪ್ರಕ್ರಿಯೆ ಪೂರ್ಣಗೊಳಿಸಲು ಪತಿ ಅಥವಾ ಪತ್ನಿ ಸಹಕಾರ ನೀಡದೇ ಹೋದಲ್ಲಿ, ಕಾನೂನಿನ ಪ್ರಕಾರ ನಿರ್ಧರಿಸಿ ಸೂಕ್ತ ಆದೇಶ ಹೊರಡಿಸಲು ನ್ಯಾಯಾಲಯಗಳು ಮುಕ್ತ ಅವಕಾಶ ಹೊಂದಿವೆ.

l ಜೀವನಾಂಶ ಅರ್ಜಿಗಳನ್ನು ನಿರ್ಧರಿಸಲು ಆರು ತಿಂಗಳಿಗೂ ಮೀರಿ ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ಆದೇಶದಲ್ಲಿ ನಮೂದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.