ADVERTISEMENT

ಭಾರತ ಬಂದ್‌: ರೈತರ ಬೇಡಿಕೆಗಳು ನ್ಯಾಯಸಮ್ಮತ, ಕೇಂದ್ರವು ಅವುಗಳನ್ನು ಪರಿಗಣಿಸಬೇಕು: ಕೇಜ್ರಿವಾಲ್

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ‘ಭಾರತ್ ಬಂದ್‌’ ನಡೆಸುತ್ತಿದೆ. ಬಂದ್‌ನ ಕ್ಷಣ ಕ್ಷಣದ ತಾಜಾ ಅಪ್ಡೇಟ್ ಇಲ್ಲಿದೆ. 

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 11:29 IST
Last Updated 27 ಸೆಪ್ಟೆಂಬರ್ 2021, 11:29 IST

ರೈತರ ಬೇಡಿಕೆಗಳು ನ್ಯಾಯಸಮ್ಮತ, ಕೇಂದ್ರವು ಅವುಗಳನ್ನು ಪರಿಗಣಿಸಬೇಕು: ಕೇಜ್ರಿವಾಲ್

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರಿಂದ ಮೆರವಣಿಗೆ

ಮೈಸೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮೈಸೂರಿನ ಗನ್ ಹೌಸ್ ನಿಂದ ಮೆರವಣಿಗೆ ಹೊರಟರು‌. ದೇವರಾಜ ಅರಸು ರಸ್ತೆ ಸಂತೇಪೇಟೆ ಚಿಕ್ಕಗಡಿಯಾರ ಧನ್ವಂತರಿ ರಸ್ತೆ ಜೆ ಎಲ್ ಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಪ್ರತಿಭಟನೆ

ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು

ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ

ಶ್ರೀರಂಗಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು

ADVERTISEMENT

ಕೊಪ್ಪಳದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ

ಕೊಪ್ಪಳ: ಮೂರು ಕೃಷಿ ಕಾಯ್ದೆ ರದ್ದತಿಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡದ್ದ ಭಾರತ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗುಟ್ಟುಗಳು ವಾಹನಗಳು ಎಂದಿನಂತೆ ಸಂಚಾರ ಆರಂಭಿಸಿದ್ದವು.

ಪ್ರತಿಭಟನಾಕಾರರು ಊರು ಸುತ್ತಿ ಅಂಗಡಿಗಳನ್ನು ಬಂದ್ ಮಾಡಿಸಲು ಬಂದಾಗ ವ್ಯಾಪಾರಸ್ಥರ ಜೊತೆ ವಾಗ್ವಾದ ನಡೆಯಿತು

ಮಂಡ್ಯದ ಜೆ.ಸಿ ವೃತ್ತದಲ್ಲಿ ಪ್ರತಿಭಟನೆ

ವಿವಿಧ ಸಂಘಟನೆಗಳ ಸದಸ್ಯರು ಮಂಡ್ಯದ ಜೆ.ಸಿ ವೃತ್ತದಲ್ಲಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು

ಬಂದ್ ಗೆ ಸಿಗದ ಸ್ಪಂದನೆ: ರೈತ ಸಂಘ, ಸಿಐಟಿಯುದಿಂದ ಪ್ರತಿಭಟನೆ 

ಶಿರಸಿ: ಕೃಷಿ ತಿದ್ದುಪಡಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ಒತ್ತಾಯಿಸಿ ಕರೆ ನೀಡಲಾಗಿದ್ದ ಬಂದ್ ಗೆ ನಗರದಲ್ಲಿ ಸ್ಪಂದನೆ ಸಿಗಲಿಲ್ಲ. ಅಂಗಡಿ ಮುಂಗಟ್ಟುಗಳು ತೆರದಿದ್ದವು. ಸಂಚಾರ ಸಹಜವಾಗಿತ್ತು.

ರಾಮನಗರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನೆ

ರಾಮನಗರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಯಿತು. ಎಪಿಎಂಸಿ ಆವರಣದಿಂದ ಐಜೂರು‌ ವೃತ್ತದ ವರೆಗೆ ಮೆರವಣಿಗೆ ಹೊರಟ ರೈತರು , ಐಜೂರು ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

ಕರ್ನಾಟಕ ರಾಜ್ಯ ರೈತಸಂಘ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಲಬುರ್ಗಿ ಜಿಲ್ಲಾ ಘಟಕದಿಂದ ಸೋಮವಾರ ಎಸ್.ವಿ.ಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು

ರಾಮನಗರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನೆ

ರಾಮನಗರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಯಿತು. ಎಪಿಎಂಸಿ ಆವರಣದಿಂದ ಐಜೂರು‌ ವೃತ್ತದ ವರೆಗೆ ಮೆರವಣಿಗೆ ಹೊರಟ ರೈತರು , ಐಜೂರು ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

ಪ್ರತಿಭಟನಕಾರರು, ಅಂಗಡಿ ಮಾಲೀಕರ ನಡುವೆ ವಾಗ್ವಾದ

ಮಡಿಕೇರಿ: ನಗರದ ಮಾರುಕಟ್ಟೆ ಪ್ರದೇಶದಲ್ಲಿ  ಬಲವಂತದಿಂದ ಅಂಗಡಿ ಮುಂಗಟ್ಟು ಬಂದ್ ಮಾಡಿಸಲು ಮುಂದಾಗಿದ್ದು ಪ್ರತಿಭಟನಕಾರರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆಯಿತು

ಹಾವೇರಿಯಲ್ಲಿ ಪ್ರತಿಭಟನೆ

"ಭಾರತ ಬಂದ್" ಬೆಂಬಲಿಸಿ, ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ರೈತ ಸಂಘಟನೆ ಮತ್ತು ಹಸಿರು ಸೇನೆ ಸಂಘಟನೆಗಳು ಪ್ರತಿಭಟನೆ ನಡೆಸಿದವು

ರೈತರ ಪ್ರತಿಭಟನೆ ಆರಂಭ

ತುಮಕೂರು: ಕೃಷಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿರುವ ಬಂದ್‌ಗೆ ವಿವಿಧ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಇಳಿದಿವೆ. ಕಾರ್ಮಿಕ ಸಂಘಟನೆಗಳು, ಎಡ ಪಕ್ಷಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಬೀದಿಗಿಳಿದು ಹೋರಾಟ

ಧಾರವಾಡ: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಯಶಸ್ವಿಗೊಳಿಸಲು ವವಿಧ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆಯಿಂದ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

ಬಂದ್ ನೀರಸ

ಉಡುಪಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಖಾಸಗಿ, ಕೆಎಸ್‌ಆರ್‌ಟಿಸಿ ಹಾಗೂ ಆಟೊಗಳ ಸಂಚಾರ ಎಂದಿನಂತಿದೆ. ವ್ಯಾಪಾರ ವಹಿವಾಟು ನಡೆಯುತ್ತಿದೆ. ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಬಂದ್‌ಗೆ ಬೆಂಬಲ ನೀಡಿದೆ. ಹಲವು ಸಂಘಟನೆಗಳು ಬಂದ್‌ನಲ್ಲಿ ಭಾಗವಹಿಸಿವೆ.

ಭಾರತ ಬಂದ್: ರಿಂಗ್ ರಸ್ತೆಯ ವೃತ್ತಗಳಲ್ಲಿ ರಸ್ತೆ ತಡೆ

ಕಲಬುರ್ಗಿ: ಭಾರತ ಬಂದ್ ಅಂಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ರಸ್ತೆ ತಡೆ ಆರಂಭವಾಗಿರುವ ಮಧ್ಯೆಯೇ ಪ್ರತಿಭಟನಾಕಾರರ ಗುಂಪುಗಳು ರಾಮಮಂದಿರ ರಸ್ತೆ, ಆಳಂದ ನಾಕಾ, ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್, ಹುಮನಾಬಾದ್ ವೃತ್ತದಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿತು.

ಭಾರತ್ ಬಂದ್ ಬಿಸಿ ಬಳ್ಳಾರಿಗರಿಗೆ ಬೆಳಿಗ್ಗೆಯೇ ತಟ್ಟಿದೆ

ಬಳ್ಳಾರಿ: ರೈತ ವಿರೋಧಿ ಕೃಷಿ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ ಭಾರತ್ ಬಂದ್ ಬಿಸಿ ಬಳ್ಳಾರಿಗರಿಗೆ ಬೆಳಿಗ್ಗೆಯೇ ತಟ್ಟಿದೆ. ಬಂದ್‌ ಬೆಂಬಲಿಸಲು 6ಗಂಟೆಗೆ ಬೀದಿಗಿಳಿದ ಕೆಲವು ಸಂಘಟನೆಗಳ ಕಾರ್ಯಕರ್ತರು ರಾಯಲ್‌ ಸರ್ಕಲ್‌ನಲ್ಲಿ ಕೃಷಿ ಕಾಯ್ದೆ ತಿದ್ದುಪಡಿಗೆ ಬೆಂಕಿ ಹಚ್ಚಿದರು.

ಬೆಳೆ ಸುರಿದು ಪ್ರತಿಭಟನೆ: ರೈತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ದಾವಣಗೆರೆ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ  ಭಾರತ್ ಬಂದ್ ಬೆಂಬಲಿಸಿ  ರೈತ ಸಂಘಟನೆಗಳು ಈರುಳ್ಳಿ, ಎಲೆಕೋಸು, ನುಗ್ಗೆಕಾಯಿ ಸುರಿದು ಪ್ರತಿಭಟನೆ ನಡೆಸಿ, ಬೆಲೆ ಕುಸಿತಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಬಂದ್; ಮಿಶ್ರ ಪ್ರತಿಕ್ರಿಯೆ

ಹೊಸಪೇಟೆ (ವಿಜಯನಗರ): ವಿವಿಧ ರೈತ ಸಂಘಟನೆಗಳು ಕರೆ ಕೊಟ್ಟಿರುವ ಭಾರತ ಬಂದ್ ಗೆ ಸೋಮವಾರ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ ಎಂದಿನಂತೆ ಹಾಲು, ದಿನಪತ್ರಿಕೆ ಪೂರೈಕೆಯಾಗಿದೆ. ಬಸ್, ಆಟೊ ಸಂಚಾರ ಸಾಮಾನ್ಯವಾಗಿದೆ. 

ರಾಯಚೂರು: ಭಾರತ‌ ಬಂದ್ -ಪ್ರತಿಭಟನೆಗೆ ಸಿಮೀತ

ರಾಯಚೂರು: ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ ಬಂದ್ ಗೆ ರಾಯಚೂರು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಭಟನೆಗೆ ಬಂದ್ ಸಿಮೀತವಾಗಿದೆ.

ಸರ್ಕಾರಿ ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನಂತಿದೆ. ವ್ಯಾಪಾರಿ ಮಳಿಗೆಗಳು ತೆರೆದುಕೊಳ್ಳುತ್ತಿವೆ.‌ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ.

ರೈತಪರ ಸಂಘಟನೆಗಳು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಹೊಸ ಕೃಷಿ ಕಾಯ್ದೆಗಳನ್ನು ಕೈಬಿಡುವಂತೆ ಕೇಂದ್ರವನ್ನು ಒತ್ತಾಯಿಸುತ್ತಿವೆ.

ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು

ಮೈಸೂರು: ಇಲ್ಲಿ‌ನ ಗ್ರಾಮಾಂತರ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಪ್ರತಿಭಟನಕಾರರು ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯಿಂದ ಸುಮಾರು ಒಂದು ಗಂಟೆಯಿಂದ ಮೈಸೂರು ನೀಲಗಿರಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಉಳಿದಂತೆ ನಗರದೆಲ್ಲೆಡೆ ಸಹಜ ಸ್ಥಿತಿ ಇದೆ

ಚಿಕ್ಕಮಗಳೂರಿನಲ್ಲಿ ಜನ, ವಾಹನ ಸಚಾರ ಸಹಜ

ಚಿಕ್ಕಮಗಳೂರು: ನಗರದಲ್ಲಿ ಜನ, ವಾಹನ ಸಚಾರ ಸಹಜವಾಗಿದೆ. 
ದಟ್ಟಣೆ ತುಸು ಕಡಿಮೆ ಇದೆ ಹೋಟೆಲ್, ಔಷಧ ಮಳಿಗೆ, ಹಾಲಿನ  ಕೇಂದ್ರ, ಹೂವಿನ ಅಂಗಡಿ ಮೊದಲಾದವು ತೆರೆದಿವೆ.

ವಿವಿಧ ಸಂಘಟನೆಗಳವರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಯಾದಗಿರಿ: ಮಳೆ ನಡುವೆಯೂ ಭಾರತ ಬಂದ್ ಗೆ ಬೆಂಬಲಿಸಿ ಹೋರಾಟಗಾರರ ಪ್ರತಿಭಟನೆ

ಯಾದಗಿರಿ: ಕೇಂದ್ರ ಸರ್ಕಾರದ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮಳೆ ನಡುವೆಯೂ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರ ಬಸ್ ನಿಲ್ದಾಣದ ಮುಂದೆ ಎಐಟಿಯುಸಿ, ಎಸ್ ಯುಸಿಐ, ಸಿಪಿಎಂ, ಸಿಪಿಐ ಆರ್ ಎಸ್ ಕೆ ಹಾಗೂ ವಿವಿಧ ಸಂಘಟನೆ ಸದಸ್ಯರಿಂದ ಮಳೆಯಲ್ಲಿಯೇ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯಲು ಆಗ್ರಹಿಸುತ್ತಿದ್ದಾರೆ.

ಪಂಜಿನ ಮೆರವಣಿಗೆ, ಹೂ ಸುರಿದು ಪ್ರತಿಭಟನೆ

ಚಿಕ್ಕಬಳ್ಳಾಪುರ: ಕೃಷಿ ಕಾಯ್ದೆ ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ  ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಬೆಳಿಗ್ಗೆಯೇ ಪಂಜಿನ ಮೆರವಣಿಗೆ ನಡೆಸಿದರು. ಶಿಡ್ಲಘಟ್ಟ ವೃತ್ತದಲ್ಲಿ ಹೂ ಸುರಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂದ್ ಬೆಂಬಲಿಸಿ ಪ್ರತಿಭಟನೆ; ವ್ಯಾಪಾರ, ವಹಿವಾಟು ಸ್ಥಗಿತ

ವಿಜಯಪುರ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಲಾಗಿರುವ ಬಂದ್ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆ, ಪಕ್ಷಗಳ ಪ್ರತ್ಯೇಕ ಪ್ರತಿಭಟನೆ

ಚಿಕ್ಕಬಳ್ಳಾಪುರ: ಬಂದ್ ಪ್ರಯುಕ್ತ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿವೆ. ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ ನಂತರ ಶಿಡ್ಲಘಟ್ಟ ವೃತ್ತದಿಂದ ಸಿಐಟಿಯು ಹಾಗೂ ಸಿಪಿಎಂ ಕಾರ್ಯಕರ್ತರು ಬೈಕ್ ರ್ಯಾಲಿ ಆರಂಭಿಸಿದರು.

ಇದೇ ವೃತ್ತದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಹ ಪ್ರತ್ಯೇಕವಾಗಿ  ಪ್ರತಿಭಟನೆ ನಡೆಸಲಿವೆ.

ಪ್ರಧಾನಿ ಮೋದಿಗೆ ಈರುಳ್ಳಿ ಹಾರ

ಚಿತ್ರದುರ್ಗ: ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆನೀಡಿರುವ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ ನಡೆಸಿದರು.

ರಾಮನಗರ: ಸಂಘಟನೆಗಳಿಂದ ಪ್ರತಿಭಟನೆ

ಭಾರತ್ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದವು.

ರಾಮನಗರದ ಐಜೂರು ವೃತ್ತದಲ್ಲಿ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಕೆಲವು‌ ಕಾಲ  ಹೆದ್ದಾರಿ ತಡೆ ನಡೆಸಿದರು‌‌. ಈ ವೇಳೆ ಟೈರ್ ಗೆ ಬೆಂಕಿ ಹಚ್ಚಲು  ನಿರಾಕರಿಸಿದ ಪೊಲೀಸರೊಂದಿಗೆ ಮಾಜಿ ಶಾಸಕ ಕೆ. ರಾಜು, ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಹೇಂದ್ರ ವಾಗ್ವಾದ ನಡೆಸಿದರು.

ಮೈಸೂರು; ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ

ಇಲ್ಲಿನ ಕೆ ಎಸ್ ಆರ್ ಟಿ ಸಿ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಸೇರಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಪುರಭವನದ ಮುಂಭಾಗದಿಂದ ಮೆರವಣಿಗೆಯಲ್ಲಿ ಬಂದ ಎಸ್ ಡಿ ಪಿ ಐ, ಪಿ ಎಫ್ ಐ, ಸಿಪಿಐ,ಸಿಪಿಐಎಂ, ಎಐಡಿಎಸ್ಓ, ಎಐಟಿಸಿ ಸೇರಿದಂತೆ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.

ಹೋರಾಟಗಾರರಾದ ಪ.ಮಲ್ಲೇಶ್, ಚೋರನಹಳ್ಳಿ ಶಿವಣ್ಣ ಸೇರಿದಂತೆ ಹಲವು ಮುಖಂಡರು ಇದ್ದಾರೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ರೈತರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್‌ಗೆ ಮುತ್ತಿಗೆ ಹಾಕಲು ಬಂದ ರೈತರನ್ನು ಪೊಲೀಸರು ‌ವಶಕ್ಕೆ ಪಡೆದರು.

ಪ್ರತಿಭಟನಾನಿರತ 40 ಮಂದಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ಮುಂಜಾಗ್ರತಾ ಕ್ರಮವಾಗಿ ಟೋಲ್ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾಂಗ್ರೆದ್ ಕಿಸಾನ್ ಘಟಕದವರು ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗಾವಿಯಲ್ಲಿ ರೈತರ ಪ್ರತಿಭಟನೆ

 ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಬಂದ್ ಬೆಂಬಲಿಸಿ ಕೆಲವು ರೈತ ಮುಖಂಡರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಹಳೆಯ ಟೈರ್ ಸುಟ್ಟು, ಕೇಂದ್ರ ಸರ್ಕಾರದ ನೀತಿ ವಿರುದ್ಧ ಘೋಷಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಸಿದಗೌಡ ಮೋದಗಿ, ರಾಘವೇಂದ್ರ ನಾಯ್ಕ ಪಾಲ್ಗೊಂಡಿದ್ದರು.

ಮೈಸೂರಿನಲ್ಲಿ ರಸ್ತೆ ತಡೆ; ಪ್ರತಿಭಟನೆ

ರೈತ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಮೈಸೂರು ನಂಜನಗೂಡು ರಾಷ್ಟ್ರೀಯ ಹೆದ್ದಾರಿ ತಡೆದು ಸೋಮವಾರ ಕೆಲಕಾಲ ಪ್ರತಿಭಟನೆ ನಡೆಸಿದರು ‌.

ಗಣಪತಿ ಸಚ್ಚಿದಾನಂದ ಆಶ್ರಮದ ಮುಂಭಾಗ ಸಂಯುಕ್ತ ಕಿಸಾನ್ ಮೋರ್ಚಾ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಇದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಬಾಗಲಕೋಟೆ: ರೈತ ಸಂಘದಿಂದ ಹೆದ್ದಾರಿ ತಡೆ 

ಬಾಗಲಕೋಟೆ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರೋಧಿಸಿ ಸೋಮವಾರ ಕರೆದಿರುವ ಭಾರತ್ ಬಂದ್ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಹುನಗುಂದದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದರು.

ಚಾಮರಾಜನಗರದಲ್ಲಿ ರೈತ ಸಂಘಟನೆಗಳು, ಬಿಎಸ್ ಪಿ, ಎಸ್ ಡಿಪಿಐ ಪಕ್ಷಗಳು ಭಾರತ್ ಬಂದ್ ಗೆ‌ ಬೆಂಬಲ

ಚಾಮರಾಜನಗರದಲ್ಲಿ ರೈತ ಸಂಘಟನೆಗಳು, ಬಿಎಸ್ ಪಿ, ಎಸ್ ಡಿಪಿಐ ಪಕ್ಷಗಳು ಭಾರತ್ ಬಂದ್ ಗೆ‌ ಬೆಂಬಲ ನೀಡಿದ್ದು, ಸಂಘಟನೆಗಳು ಹಾಗೂ ಪಕ್ಷಗಳ ಕಾರ್ಯಕರ್ತರು ನಗರದ ಬಸ್ ನಿಲ್ದಾಣ ಹಾಗೂ ಭುವನೇಶ್ವರಿ ವೃತ್ತದಲ್ಲಿ ಟೈರ್ ಗೆ  ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು..

ಭಾರತ ಬಂದ್: ಕಲಬುರ್ಗಿಯಲ್ಲಿ ಬಸ್ ಸಂಚಾರ ಸ್ಥಗಿತ

ಕಲಬುರ್ಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು‌ ಎಂದು ಒತ್ತಾಯಿಸಿ ವಿವಿಧ ರೈತ, ಕಾರ್ಮಿಕ ಹಾಗೂ ಪಕ್ಷಗಳು ಕರೆ ನೀಡಿರುವ ಭಾರತ ಬಂದ್ ಅಂಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಪ್ರತಿಭಟನಾಕಾರರು ಬಸ್ ಸಂಚಾರ ಸ್ಥಗಿತಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.