ADVERTISEMENT

ಕಿಸಾನ್‌ ಸಮ್ಮಾನ್‌ ನಿಧಿ: 17.75 ಲಕ್ಷ ನೋಂದಣಿ

ಕೆಲಸಕ್ಕೆ ವೇಗ ನೀಡಿದ ‘ಫ್ರೂಟ್ಸ್‌’ ಆ್ಯಪ್‌; ಮಾರ್ಚ್‌ನಲ್ಲೇ ಮೊದಲ ಕಂತು l 9.50 ಲಕ್ಷ ಮಂದಿಯ ದಾಖಲಾತಿ ಪೂರ್ಣ

ಸಂತೋಷ ಈ.ಚಿನಗುಡಿ
Published 12 ಮಾರ್ಚ್ 2019, 19:53 IST
Last Updated 12 ಮಾರ್ಚ್ 2019, 19:53 IST
ಸಾಂದರ್ಭಿಕ ಕ್ಯಾರಿಕೇಚರ್‌
ಸಾಂದರ್ಭಿಕ ಕ್ಯಾರಿಕೇಚರ್‌   

ಕಲಬುರ್ಗಿ: ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆ ಯಶಸ್ವಿಗೊಳಿಸಲು ಕೃಷಿ ಇಲಾಖೆಯಲ್ಲಿ ಸಮರೋಪಾದಿ ಕೆಲಸಯಲ್ಲಿ ಕೆಲಸ ಮಾಡುತ್ತಿದ್ದು, ಮಾರ್ಚ್‌ ಅಂತ್ಯದೊಳಗೆ ರಾಜ್ಯದ ಬಹುಪಾಲು ರೈತರಿಗೆ ಮೊದಲ ಕಂತಿನ ಹಣ ಪಾವತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಫೆ. 24ರಂದು ಯೋಜನೆಗೆ ಚಾಲನೆ ನೀಡಿದರು. ಆದರೆ, ಬಜೆಟ್‌ನಲ್ಲಿ ಯೋಜನೆ ಘೋಷಣೆಯಾದ ಮರುದಿನವೇ ಕೃಷಿ ಇಲಾಖೆ ರಾಜ್ಯದೆಲ್ಲೆಡೆ ರೈತರ ನೋಂದಣಿ ಆರಂಭಿಸಿದೆ. ರಾಜ್ಯದ ಒಟ್ಟು ರೈತರ ಸಂಖ್ಯೆ 3.13 ಕೋಟಿ. ಎರಡು ವಾರದಲ್ಲಿ ಅಂದರೆ; ಮಾರ್ಚ್‌ 8ರ ಹೊತ್ತಿಗೆ 17.75 ಲಕ್ಷ ರೈತರು ನೋಂದಣಿ ಮಾಡಿಸಿಕೊಂಡಿದ್ದು, 9.50 ಲಕ್ಷ ಮಂದಿಯ ದಾಖಲಾತಿ ಪೂರ್ಣಗೊಂಡಿದೆ. ಇವರ ಖಾತೆಗೆ ಮಾರ್ಚ್‌ನಲ್ಲಿ ₹ 2,000 ಬೀಳುವುದು ನಿಕ್ಕಿ.

ನೋಂದಾಯಿಸುವುದು ಹೇಗೇ?: ಯೋಜನೆಗೆ ಸಂಬಂಧಿಸಿದಂತೆ ಸಿ, ಡಿ, ಮತ್ತು ಇ ಎಂಬ ಮೂರು ಮಾದರಿಯ ಅರ್ಜಿಗಳು ಇವೆ. ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಹಾಗೂ ಅತೀ ಸಣ್ಣ ರೈತರ ಹೆಸರು ನೋಂದಣಿಗೆ ‘ಸಿ’ ನಮೂನೆ ಬಳಸಬೇಕು.

ADVERTISEMENT

ಫಲಾನುಭವಿ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಂಥವರು ನಮೂನೆ ‘ಡಿ’ನಲ್ಲಿ ಅರ್ಜಿ ಸಲ್ಲಿಸಬೇಕು.

ಫಲಾನುಭವಿ ಅಲ್ಲದಿದ್ದರೂ ಪಟ್ಟಿಯಲ್ಲಿ ಹೆಸರು ಬಂದಿದ್ದರೆ, ಅದನ್ನು ತೆಗೆದುಹಾಕಲು ‘ಇ’ ನಮೂನೆಯ ಅರ್ಜಿ ಸಲ್ಲಿಸಬೇಕು. ಸರ್ಕಾರಿ ನೌಕರಸ್ಥ ಕುಟುಂಬದವರು ₹ 10 ಸಾವಿರಕ್ಕೂ ಹೆಚ್ಚು ಸಂಬಳ ಇಲ್ಲವೇ ಪಿಂಚಣಿ ಪಡೆಯುವವರು, ಸಾಂವಿಧಾನಿಕ ಹುದ್ದೆ ಹೊಂದಿದವರು ಈ ಯೋಜನೆಯ ಫಲಾನುಭವಿ ಅಲ್ಲ. ಅವರು ಸಣ್ಣ ಅಥವಾ ಅತೀ ಸಣ್ಣ ರೈತರಾಗಿದ್ದರೂ ಯೋಜನೆ ಬಳಸಿಕೊಳ್ಳಲು ಅವಕಾಶವಿಲ್ಲ. ವಾಮಮಾರ್ಗದಿಂದ ಬಳಸಿಕೊಂಡರೆ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.

‘ಫ್ರೂಟ್ಸ್‌’ ಆ್ಯಪ್‌ ಬಳಕೆ: ಕಿಸಾನ್‌ ಸಮ್ಮಾನ್‌ ಯಶಸ್ವಿ ಅನುಷ್ಠಾನಕ್ಕಾಗಿ ‘ಪ್ರೂಟ್ಸ್‌’ (FRUITS- ಫಾರ್ಮರ್‌ ರಿಜಿಸ್ಟ್ರೇಷನ್‌ ಅಂಡ್‌ ಯುನಿಫೈಡ್‌ ಬೆನಿಫಿಸರಿ ಇನ್ಫಾರ್ಮೇಷನ್‌ ಸಿಸ್ಟಂ) ಎಂಬ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಗ್ರಾಮ ಮಟ್ಟದಿಂದ ಕೃಷಿ ಇಲಾಖೆಗೆ ಬರುವ ರೈತರ ಮಾಹಿತಿಯನ್ನು ಈ ಆ್ಯಪ್‌ನಲ್ಲಿ ಅಳವಡಿಸಲಾಗುತ್ತದೆ. ಇದು ನೇರವಾಗಿ ತಹಶೀಲ್ದಾರ್‌ ಕಚೇರಿಗೆ ತಲುಪುತ್ತದೆ. ಅಲ್ಲಿ ದಾಖಲೆ ಪರಿಶೀಲಿಸಿ, ರಾಜ್ಯ ವಲಯಕ್ಕೆ ಕಳುಹಿಸಲಾಗುತ್ತದೆ.

ರಾಜ್ಯಮಟ್ಟದಲ್ಲಿ ‘ಪಿಎಂ ಕಿಸಾನ್‌’ ಎಂಬ ಪ್ರತ್ಯೇಕ ಘಟಕವನ್ನು ಇದಕ್ಕಾಗಿಯೇ ತೆರೆಯಲಾಗಿದೆ. ಇದರ ಮೂಲಕ ಫಲಾನುಭವಿಯ ಮಾಹಿತಿ ಕೇಂದ್ರಕ್ಕೆ ತಲುಪುತ್ತದೆ. ಇದಾದ ಮರುದಿನವೇ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಫಲಾನುಭವಿಯ ಮೊಬೈಲ್‌ಗೆ ಮೆಸೇಜ್‌ ಕಳುಹಿಸುವ ಮೂಲಕ ಇದನ್ನು ಖಚಿತಪಡಿಸಲಾಗುತ್ತದೆ.

ಹಳ್ಳಿಯಿಂದ–ದಿಲ್ಲಿಯವರೆಗೆ ಪ್ರತಿಯೊಂದು ಹಂತ ಆನ್‌ಲೈನ್‌ ಮೂಲಕ ನಡೆಯುವುದರಿಂದ ಕೆಲಸಕ್ಕೆ ವೇಗ ಬಂದಿದೆ. ಕಲಬುರ್ಗಿ ಜಿಲ್ಲೆಯೊಂದರಲ್ಲೇ ಇದರ ಪ್ರಚಾರಕ್ಕಾಗಿ ಬರೋಬ್ಬರಿ 100 ಮಂದಿಯನ್ನು ನಿಯೋಜಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೋಂದಣಿ ಎಲ್ಲಿ, ಎಷ್ಟು?
ತುಮಕೂರು, ಬೀದರ್‌ ಹಾಗೂ ಹಾಸನ, ವಿಜಯಪುರ ಜಿಲ್ಲೆಗಳಲ್ಲಿ 1.10 ಲಕ್ಷಕ್ಕೂ ಹೆಚ್ಚು ರೈತರ ನೋಂದಣಿ ಮುಗಿದಿದ್ದು, ಮೊದಲ ಸ್ಥಾನದಲ್ಲಿವೆ.

ಕಲಬುರ್ಗಿ, ಹಾವೇರಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ 75 ಸಾವಿರಕ್ಕೂ ಹೆಚ್ಚು, ಉಳಿದ ಜಿಲ್ಲೆಗಳಲ್ಲಿ 60 ಸಾವಿರದ ಆಸುಪಾಸು ನೋಂದಣಿಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತೀ ಕಡಿಮೆ; ಅಂದರೆ 5,253 ರೈತರ ನೋಂದಣಿ ಮಾಡಲಾಗಿದೆ.

ರಾಜ್ಯವೇ ನಂಬರ್‌ ಒನ್‌
ಕಿಸಾನ್‌ ಸಮ್ಮಾನ್‌ ಶೀಘ್ರ ಕಾರ್ಯರೂಪಕ್ಕೆ ಬರಲು ‘ಭೂಮಿ’ ಸಾಫ್ಟ್‌ವೇರ್‌ ನೆರವಾಗಿದೆ. ಇದರಲ್ಲಿ ಈಗಾಗಲೇ ರಾಜ್ಯದ ಎಲ್ಲ ರೈತರ ಕರಾರುವಾಕ್‌ ಭೂ ದಾಖಲೆಗಳು ಇವೆ. ಪ್ರತಿಯೊಬ್ಬರ ಆಧಾರ್‌ ಸಂಖ್ಯೆ ದಾಖಲಿಸಲಾಗಿದೆ. ಇದರ ಮೂಲಕ ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಹುಡುಕುವುದು ಸುಲಭವಾಗಿದ್ದು, ಮೋಸಕ್ಕೆ ಅವಕಾಶವೇ ಇಲ್ಲ.

ಈ ರೀತಿ ಎಲ್ಲ ರೈತರ ದಾಖಲೆಗಳನ್ನು ಗಣಕೀಕರಣ ಮಾಡುವಲ್ಲಿ ರಾಜ್ಯವೇ ನಂಬರ್‌ ಒನ್‌ ಸ್ಥಾನದಲ್ಲಿದೆ ಎಂಬುದು ಕಲಬುರ್ಗಿ ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸೂಗೂರು ಅವರ ಮಾಹಿತಿ.

₹ 6,000 ಹಂಚಿಕೆ ಹೇಗೆ, ಏಕೆ?
* ಡಿಸೆಂಬರ್‌ನಿಂದ ಮಾರ್ಚ್‌–ಕೊಯ್ಲು ಸಂದರ್ಭದಲ್ಲಿ ಬಳಕೆಗೆ
* ಏಪ್ರಿಲ್‌ನಿಂದ ಜುಲೈ– ಬೀಜ, ಗೊಬ್ಬರ ಖರೀದಿಸಲು
* ಆಗಸ್ಟ್‌ನಿಂದ ನವೆಂಬರ್‌– ಕೀಟನಾಶಕ, ಉಪಕಸುಬಿನ ಖರ್ಚಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.