ADVERTISEMENT

9.41 ಲಕ್ಷ ವಿದ್ಯಾರ್ಥಿಗಳಿಗೆ ರೈತ ವಿದ್ಯಾರ್ಥಿ ನಿಧಿ

₹394.93 ಕೋಟಿ ಮೊತ್ತ ಪಾವತಿಸಿದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 19:43 IST
Last Updated 7 ಸೆಪ್ಟೆಂಬರ್ 2022, 19:43 IST

ಬೆಂಗಳೂರು: ಕೃಷಿಕರ ಮಕ್ಕಳ ಭವಿಷ್ಯ ಹಸನಾಗಿಸುವ ನಿಟ್ಟಿನಲ್ಲಿ ರೂಪಿಸಲಾದ ಮುಖ್ಯಮಂತ್ರಿ ರೈತ ವಿದ್ಯಾರ್ಥಿ ನಿಧಿ ಯೋಜನೆಯನ್ನು ಇದುವರೆಗೆ ರಾಜ್ಯದ 9.41 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.

ಈ ವಿದ್ಯಾರ್ಥಿಗಳಿಗೆ ₹394.93 ಕೋಟಿ ಮೊತ್ತವನ್ನು ಸರ್ಕಾರ ಪಾವತಿಸಿದೆ. ಇದರಿಂದ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಕೂಡಲೇ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರ ರೈತರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆಯಾಗಿತ್ತು.

ADVERTISEMENT

ಈ ಯೋಜನೆ ಅಡಿ 8, 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳು ಮತ್ತು ಎಸ್ಸೆಸ್ಸೆಲ್ಸಿ ನಂತರ ಪಿಯುಸಿ, ಡಿಪ್ಲೊಮಾ, ಐಟಿಐ, ಪದವಿ, ವೃತ್ತಿಪರ ಶಿಕ್ಷಣ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಬಾಗಲಕೋಟೆ ಜಿಲ್ಲೆಯ 46,135 ವಿದ್ಯಾರ್ಥಿಗಳಿಗೆ ₹17.35 ಕೋಟಿ ಮೊತ್ತ ಪಾವತಿಸಲಾಗಿದೆ. ಇದು ರಾಜ್ಯದಲ್ಲೇ ಹೆಚ್ಚಿನ ಮೊತ್ತವಾಗಿದೆ. ನಂತರದ ಸ್ಥಾನದಲ್ಲಿ, ಬಳ್ಳಾರಿ ಜಿಲ್ಲೆಯ 40,900 ವಿದ್ಯಾರ್ಥಿಗಳಿಗೆ ₹16.34 ಕೋಟಿ ಹಾಗೂ ಬೆಳಗಾವಿ ಜಿಲ್ಲೆಯ 96,536 ವಿದ್ಯಾರ್ಥಿಗಳಿಗೆ ₹36.11 ಕೋಟಿ ಮೊತ್ತ ಪಾವತಿಸಲಾಗಿದೆ.

ಸೆಕೆಂಡರಿ ಅಗ್ರಿಕಲ್ಚರ್‌ ನಿರ್ದೇಶನಾಲಯ: ರೈತರ ಆದಾಯ ವೃದ್ಧಿಸುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ‘ಸೆಕೆಂಡರಿ ಕೃಷಿ’ಯು ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖವಾಗಿದೆ.

ಕೃಷಿಯ ಪ್ರಾಥಮಿಕ ಉತ್ಪನ್ನಗಳನ್ನು ಸ್ಥಳೀಯ ಮಾನವ ಸಂಪನ್ಮೂಲ ಮತ್ತು ಕೌಶಲಗಳನ್ನು ಬಳಸಿ ಮೌಲ್ಯವರ್ಧನೆ ಮಾಡುವುದು ಹಾಗೂ ಅದರಿಂದ ರೈತರಿಗೆ ಹೆಚ್ಚಿನ ಆದಾಯ ಒದಗಿಸುವ ಚಟುವಟಿಕೆಗಳನ್ನು ‘ಸೆಕೆಂಡರಿ ಕೃಷಿ’ ಎಂದು ವ್ಯಾಖ್ಯಾನಿಸಲಾಗಿದೆ.

ವಿದ್ಯಾ ನಿಧಿ ವಿಸ್ತರಣೆ

ರೈತರ ಮಕ್ಕಳಿಗೆ ನೀಡುತ್ತಿರುವ ‘ವಿದ್ಯಾ ನಿಧಿ’ ವಿದ್ಯಾರ್ಥಿ ವೇತನ ಯೋಜನೆಯನ್ನು ನೇಕಾರರು, ಮೀನುಗಾರರು ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಿಸಲಾಗಿದೆ. ‘ವಿದ್ಯಾ ನಿಧಿಯಡಿ ₹2 ಸಾವಿರದಿಂದ ₹11ಸಾವಿರದವರೆಗೆ ವಿದ್ಯಾರ್ಥಿವೇತನ ಸಿಗಲಿದೆ. ನೇಕಾರರ ಸಮುದಾಯದ 12 ಸಾವಿರ ಮಕ್ಕಳಿಗೆ, ಟ್ಯಾಕ್ಸಿ ಚಾಲನೆ ಮಾಡುವ 50 ಸಾವಿರ ಚಾಲಕರ ಮಕ್ಕಳಿಗೆ ಹಾಗೂ ಮೀನುಗಾರರ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.