ADVERTISEMENT

ಭದ್ರಾ ಮೇಲ್ದಂಡೆ ಅನುದಾನ ಕೊಡದೆ ರೈತರಿಗೆ ಮೋಸ: ಸಂಸದ ತೇಜಸ್‌ ಪಟೇಲ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 15:27 IST
Last Updated 11 ಫೆಬ್ರುವರಿ 2025, 15:27 IST
   

ನವದೆಹಲಿ: ‘ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿರುವ ₹5,300 ಕೋಟಿ ಅನುದಾನ ನೀಡದೆ ಕೇಂದ್ರ ಸರ್ಕಾರವು ರಾಜ್ಯದ ರೈತರಿಗೆ ಮೋಸ ಮಾಡಿದೆ’ ಎಂದು ಹಾಸನ ಸಂಸದ ತೇಜಸ್‌ ಎಂ. ಪಟೇಲ್‌ ಕಿಡಿಕಾರಿದರು. 

ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ‘ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆ ಕೆಲಸವನ್ನೂ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ₹5,900 ಕೋಟಿ ವಿಶೇಷ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ನಬಾರ್ಡ್‌ ಸಾಲ ಪ್ರಮಾಣವನ್ನು ₹5,600 ಕೋಟಿಯಿಂದ ₹2,800 ಕೋಟಿಗೆ ಇಳಿಸಲಾಗಿದೆ. ಕೊಬ್ಬರಿಗೆ ನೀಡಿರುವ ಕನಿಷ್ಠ ಬೆಂಬಲ ಬೆಲೆ ವೈಜ್ಞಾನಿಕವಾಗಿಲ್ಲ. ಸಕಾಲಕ್ಕೆ ಕೊಬ್ಬರಿ ಖರೀದಿ ಆಗುತ್ತಿಲ್ಲ. ಈ ಬಗ್ಗೆ ಕೇಂದ್ರ ಕೂಡಲೇ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ಹಾಸನ ಜಿಲ್ಲೆಯಲ್ಲಿ ಆನೆ ದಾಳಿಯಿಂದಾಗಿ ಕಳೆದ 21 ವರ್ಷಗಳಲ್ಲಿ 71 ಜನರು ಮೃತಪಟ್ಟಿದ್ದಾರೆ. ಮಾನವ–ವನ್ಯಜೀವಿ ಸಂಘರ್ಷ ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜತೆಗೂಡಿ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು. 

‘ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಪಾಲನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿತ್ತು. ಅದಕ್ಕೆ ಕೇಂದ್ರ ಸ್ಪಂದಿಸಿಲ್ಲ. ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಿಸಿಲ್ಲ. ಈ ಮೂಲಕ, ರಾಜ್ಯಕ್ಕೆ ಅನ್ಯಾಯ ಮಾಡಿದೆ’ ಎಂದರು. 

ಚನ್ನರಾಯಪಟ್ಟಣ–ಶ್ರೀರಂಗಪಟ್ಟಣ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಶ್ರವಣಬೆಳಗೊಳ–ಬೇಲೂರು–ಹಳೆಬೀಡಿನಲ್ಲಿ ಪ್ರವಾಸೋದ್ಯಮ ಜಾಲ ಅಭಿವೃದ್ಧಿಪಡಿಸಬೇಕು. ಹಾಸನದ ವಿಮಾನ ನಿಲ್ದಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.