ಬೆಂಗಳೂರು: ‘ರೈತರ ಬಳಿ ಅಂಗೈ ಅಗಲ ಭೂಮಿಯೂ ಉಳಿಯದಂತೆ ಕಸಿದುಕೊಂಡು ಅದನ್ನು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗಿಸಲು ರಾಜ್ಯ ಸರ್ಕಾರ ಹೊರಟಿದೆ’ ಎಂದುಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದರು.
ಭೂಸ್ವಾಧೀನ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಹಿಂಪಡೆಯವಂತೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಜನ ಚಳವಳಿಗಳ ಪರ್ಯಾಯ ಜನತಾ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಬಂಡವಾಳಶಾಹಿಗಳ ಮನೆಯಲ್ಲಿರುವ ನಾಯಿಗಳ ಹೆಸರಿನಲ್ಲಿಯೂ ಆಸ್ತಿ ಮಾಡಲು ಸರ್ಕಾರ ನೆರವಾಗುತ್ತಿದೆ’ ಎಂದರು.
‘ದೇಶದಾದ್ಯಂತ ಬಡವರ, ರೈತರ, ದಲಿತರ ಹೋರಾಟಗಳು ನಿರ್ಣಾಯಕ ಘಟ್ಟದಲ್ಲಿವೆ. ಬದುಕಲು ಜಾಗ ಕೊಡಿ, ದುಡಿಯಲು ಭೂಮಿಕೊಡಿ ಎಂದು ಕೇಳುತ್ತಿರುವ ಸಂದರ್ಭದಲ್ಲಿ ಸರ್ಕಾರಗಳು ಬಡವರ ಭೂಮಿಯನ್ನು ಕಸಿದುಕೊಳ್ಳಲು ಹವಣಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸ್ವಾತಂತ್ರ್ಯ ಚಳವಳಿಗಳು ಬ್ರಿಟಿಷರನ್ನು ಓಡಿಸಲು ಮಾತ್ರ ನಡೆಯಲಿಲ್ಲ. ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ದೊರಕಿಸಿಕೊಡಲು ನಡೆದ ಹೋರಾಟ. ಪ್ರತಿಯೊಬ್ಬ ಪ್ರಜೆಗೂ ಅತನ ಹಕ್ಕುಗಳು ದೊರೆತಾಗ ಮಾತ್ರ ಸ್ವಾತಂತ್ರ್ಯ ಚಳವಳಿಯ ಧ್ಯೇಯ ಈಡೇರಲಿದೆ’ ಎಂದು ಪ್ರತಿಪಾದಿಸಿದರು.
‘ರೈತರ ಹಿತ ಕಾಪಾಡುವ ಬದಲು ಅವರಭೂಮಿ ಕಸಿದುಕೊಳ್ಳುವ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಸರ್ಕಾರ ಸುಗ್ರೀವಾಜ್ಞೆಗಳನ್ನು ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.