ADVERTISEMENT

ಹೆದ್ದಾರಿ ತಡೆದು ರೈತರ ಆಕ್ರೋಶ

ಕಾಯ್ದೆ ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲದು– ರಾಜ್ಯ ರೈತ ಸಂಘ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 20:11 IST
Last Updated 6 ಫೆಬ್ರುವರಿ 2021, 20:11 IST
ಬೆಂಗಳೂರು ಹೊರವಲಯದ ಸಾದರಹಳ್ಳಿ ಗೇಟ್‌ ಬಳಿ ರೈತರು ಶನಿವಾರ ಪ್ರತಿಭಟನೆ ಸಂದರ್ಭದಲ್ಲಿ ರಸ್ತೆಯಲ್ಲಿ ಮೊಳೆಗಳನ್ನಿಟ್ಟು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದರು –ಪ್ರಜಾವಾಣಿ ಚಿತ್ರ
ಬೆಂಗಳೂರು ಹೊರವಲಯದ ಸಾದರಹಳ್ಳಿ ಗೇಟ್‌ ಬಳಿ ರೈತರು ಶನಿವಾರ ಪ್ರತಿಭಟನೆ ಸಂದರ್ಭದಲ್ಲಿ ರಸ್ತೆಯಲ್ಲಿ ಮೊಳೆಗಳನ್ನಿಟ್ಟು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರೈತರ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಿ ಶನಿವಾರ ಕರೆ ನೀಡಲಾಗಿದ್ದ ‘ಹೆದ್ದಾರಿ ತಡೆ’ ಚಳವಳಿಗೆ ರಾಜ್ಯದಾದ್ಯಂತ ಸ್ಪಂದನೆ ವ್ಯಕ್ತವಾಗಿದ್ದು, ಕೆಲವೆಡೆ ಮೂರು ತಾಸಿಗೂ ಹೆಚ್ಚು ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು.

ಸಂಯುಕ್ತ ಹೋರಾಟ ಸಮಿತಿ, ರೈತ ಸಂಘಟನೆ ನೇತೃತ್ವದಲ್ಲಿ ರೈತರು ನಡೆಸಿದ ಹೆದ್ದಾರಿ ತಡೆ ಚಳವಳಿ ಪೊಲೀಸ್‌ ನಿರ್ಬಂಧದ ಕಾರಣ ಹೆಚ್ಚು ತೀವ್ರಗೊಳ್ಳಲಿಲ್ಲ. ಕೆಲವು ಕಡೆ ರೈತರು ರಸ್ತೆಯಲ್ಲಿಯೇ ಅಡುಗೆ ಮಾಡಿ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಪ್ರತಿಭಟನೆ ನಡೆಸುವುದಾಗಿ ರೈತರು ಹೇಳಿದ್ದರು. ಆದರೆ, ಈ ಅವಧಿಗೂ ಮುನ್ನವೇ ಮುಖಂಡರು ಮತ್ತು ರೈತರನ್ನುಪೊಲೀಸರು ವಶಕ್ಕೆ ಪಡೆದರು.

ADVERTISEMENT

‘ಕೇಂದ್ರದಲ್ಲಿರುವುದು ಎಮ್ಮೆ ಚರ್ಮದ ಸರ್ಕಾರ. ರೈತರ ಚಳವಳಿಯನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕುವ ಕಾರ್ಯ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದಾರೆ’ ಎಂದು ಯಲಹಂಕದಲ್ಲಿ ರೈತ ಮುಖಂಡ ಕುರಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮೊಳೆ ಪ್ರತಿಭಟನೆ:

‘ದೆಹಲಿಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿರುವ ಸರ್ಕಾರ, ದೆಹಲಿ ಪ್ರವೇಶಿಸದಂತೆ ತಡೆಯಲು ದೊಡ್ಡ ಮೊಳೆಗಳನ್ನು ಹೆದ್ದಾರಿಯಲ್ಲಿ ಹಾಕಿದೆ. ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಲು ನಮ್ಮ ಬಳಿ ದುಡ್ಡಿಲ್ಲ. ಸುಮಾರು 20 ಕೆಜಿಯಷ್ಟು ಸಣ್ಣ ಮೊಳೆಗಳನ್ನು ತಂದಿಟ್ಟು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದುದೇವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟಿಸುತ್ತಿದ್ದ ರೈತ ಕೇಶವ್ ಹೇಳಿದರು.

ಹೆದ್ದಾರಿಗಳಲ್ಲಿ ಪೊಲೀಸ್‌ ಸರ್ಪಗಾವಲು ಇದ್ದರೂ ರೈತರು ಎದೆಗುಂದದೆ ಪ್ರತಿಭಟನೆ ತೀವ್ರಗೊಳಿಸಲು ಯತ್ನಿಸುತ್ತಿದ್ದರು. ರಾಮನಗರ ಮತ್ತು ಮೈಸೂರಿನಲ್ಲಿ ರಸ್ತೆಯಲ್ಲಿಯೇ ಅಡುಗೆ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.

ಮೂರು ತಾಸು ಹೆದ್ದಾರಿ ತಡೆ:

ಕಲಬುರ್ಗಿಯಲ್ಲಿ ರೈತ ಸಂಘಟನೆಗಳ ಮುಖಂಡರು ಮೂರು ತಾಸು ಹೆದ್ದಾರಿ ತಡೆ ನಡೆಸಿದರು. ರೈತ–ಕಾರ್ಮಿಕ ಸಂಘಟನೆಗಳ ಸದಸ್ಯರು ಕ್ರಾಂತಿಗೀತೆಗಳನ್ನು ಹಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾನವೀಯತೆ ಮೆರೆದ ಡಿವೈಎಸ್‌ಪಿ:

ದಾವಣಗೆರೆಯ ಎಚ್.ಕಲಪನಹಳ್ಳಿಯಲ್ಲಿ ರೈತರು ಹೆದ್ದಾರಿ ತಡೆ ನಡೆಸುತ್ತಿದ್ದ ವೇಳೆ ಚಿಕಿತ್ಸೆಗಾಗಿ ಬಸ್‌ನಲ್ಲಿ ದಾವಣಗೆರೆಗೆ ಹೊರಟಿದ್ದ ಮಗುವಿಗೆ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಅವರು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದರು.

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆದ್ದಾರಿಯ ಒಂದು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಮತ್ತೊಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ರಾಜ್ಯದಾದ್ಯಂತ ನಡೆದ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ರೈತರು ನೋಡಿಕೊಂಡರು. ಅಗ್ನಿಶಾಮಕ ವಾಹನಗಳು, ಆಂಬುಲೆನ್ಸ್ ಸರಾಗವಾಗಿ ಚಲಿಸಲು ಅವಕಾಶ ನೀಡುವ ಮೂಲಕ ಶಾಂತಿಯುತ ಹೋರಾಟ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.