ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ (ಎಂಎಸ್‌ಪಿ) ಕಾನೂನು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ದೆಹಲಿಯಲ್ಲಿ ಆಗಸ್ಟ್ 25ರಂದು ರೈತರ ರ‍್ಯಾಲಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ತೀರ್ಮಾನಿಸಿದೆ.
‘ನಗರದಲ್ಲಿ ನಡೆದ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆ ಹಾಗೂ ರಾಜ್ಯಮಟ್ಟದ ರೈತ ಸಮಾವೇಶದಲ್ಲಿ ರ‍್ಯಾಲಿ ನಡೆಸಲು ನಿರ್ಧರಿಸಲಾಯಿತು’ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಮುಖಂಡ ಜಗಜಿತ್ ಸಿಂಗ್ ದಲ್ಲೇವಾಲ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ನಮ್ಮ ಸಂಘಟನೆಯ ರೈತರ ತಂಡ ದೇಶ ವ್ಯಾಪಿ ಪ್ರವಾಸ ಮಾಡುತ್ತಿದೆ. ತಮಿಳುನಾಡಿನ ಕೊಯಮುತ್ತೂರು ಮತ್ತು ಕೃಷ್ಣಗಿರಿಯಲ್ಲಿ ಬೃಹತ್ ಸಭೆಗಳನ್ನು ನಡೆಸಿ ರೈತರನ್ನು ಜಾಗೃತಗೊಳಿಸಿದ ನಂತರ, ಬೆಂಗಳೂರಿನಲ್ಲಿ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು’ ಎಂದು ಹೇಳಿದರು.
‘ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡರು ದೇವನಹಳ್ಳಿ ಭೂಸ್ವಾಧೀನ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ಫಲವತ್ತಾದ ಕೃಷಿ ಭೂಮಿ ಉಳಿಸಿಕೊಳ್ಳುವ ರೈತರ ಹೋರಾಟವನ್ನು ಬೆಂಬಲಿಸಿದರು. ಮುಂದೆ ರೈತರಿಗೆ ಕೃಷಿ ಭೂಮಿ ಕಿತ್ತುಕೊಂಡರೆ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ರೈತರಿಗೆ ಭರವಸೆ ನೀಡಲಾಯಿತು’ ಎಂದು ಹೇಳಿದರು.
‘ಕರ್ನಾಟಕದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರಿಗೆ ಅಪಘಾತವಾದ ಸಂದರ್ಭದಲ್ಲಿ ಪಂಜಾಬ್ ಸರ್ಕಾರ ಅವರಿಗೆ ಚಿಕಿತ್ಸೆಯನ್ನು ಕೊಡಿಸಲು ಮುಂದಾಗಿತ್ತು. ಆದರೆ ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿ, ಅವರನ್ನು ಏರ್ ಅಂಬುಲೆನ್ಸ್ ಮುಖಾಂತರ ಬೆಂಗಳೂರಿಗೆ ಕರೆ ತಂದು ಚಿಕಿತ್ಸೆ ಕೊಡಿಸಿದೆ. ಅದಕ್ಕಾಗಿ ಸರ್ಕಾರಕ್ಕೆ ಧನ್ಯವಾದ’ ಎಂದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಜಗಜಿತ್ ಸಿಂಗ್ ದಲ್ಲೇವಾಲ ಅವರು ಅಂಬುಲೆನ್ಸ್‌ನಲ್ಲಿ ರೈತರ ಸಮಾವೇಶಕ್ಕೆ ಬಂದರು.
ಸಮಾವೇಶದಲ್ಲಿ ಶಾಸಕ ಬಿ.ಆರ್. ಪಾಟೀಲ, ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್. ಹಿರೇಮಠ, ಮುಖಂಡರಾದ ಪ್ರಕಾಶ್ ಕಮ್ಮರಡಿ, ಯಶವಂತ್, ವಿ.ಗಾಯತ್ರಿ, ಹರಿಯಾಣದ ಅಭಿಮನ್ಯು ಕೋಹಾರ್, ಪಂಜಾಬ್‌ನ ಸಂದೀಪ್ ಸಿಂಗ್ ಶಿರಸಾ, ಸತ್ಯನಾಂ ಸಿಂಗ್ ಬೇರು, ಉತ್ತರ ಪ್ರದೇಶದ ಅರ್ಪಾಲ್ ಚೌಧರಿ, ರಾಜಸ್ಥಾನದ ಸಂದೀಪ್ ಸಿಂಗ್, ತಮಿಳುನಾಡಿನ ರಾಮನಗೌಡ, ಎ.ಎಸ್. ಬಾಬು, ತೆಲಂಗಾಣದ ವೆಂಕಟೇಶ್ವರ ರಾವ್, ಕರ್ನಾಟಕದ ವೀರನಗೌಡ ಪಾಟೀಲ್, ಕರಿಬಸಪ್ಪಗೌಡ, ಹತ್ತಳ್ಳಿ ದೇವರಾಜ್, ಪರಶುರಾಮ್ ಎತ್ತಿನಗುಡ್ಡ ರವಿಕುಮಾರ್, ಬರಡನಪುರ ನಾಗರಾಜು, ಕಿರಗಸೂರು ಶಂಕರ್, ಸುರೇಶ ಪಾಟೀಲ ರಮೇಶ್ ಹೂಗಾರ, ಜೀವಿ ಲಕ್ಷ್ಮೀದೇವಿ, ಮಹೇಶ್ ಬೆಳಗಾಂವ್ಕರ್, ಎನ್.ಎಚ್. ದೇವಕುಮಾರ್ ಪಾಲ್ಗೊಂಡಿದ್ದರು.
ಬೇಡಿಕೆಗಳು
* ಭಾರತ– ಅಮೆರಿಕ ನಡುವೆ ಒಪ್ಪಂದದಲ್ಲಿ ಕೋಳಿ ಸಾಕಾಣಿಕೆ ಉದ್ದಿಮೆ ಹಾಗೂ ಡೇರಿ ಉತ್ಪನ್ನಗಳನ್ನು ಒಪ್ಪಂದದಿಂದ ಹೊರಗಿಡಬೇಕು
*ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಬೇಕು
* ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು
* ರೈತರ ಹೋರಾಟದ ಸಂದರ್ಭದಲ್ಲಿ ದಾಖಲಾಗಿರುವ ಎಲ್ಲಾ ಪೊಲೀಸ್ ಮೊಕದ್ದಮೆಗಳನ್ನು ಕೈಬಿಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.