ADVERTISEMENT

ವಿಶ್ವ ಅಪ್ಪಂದಿರ ದಿನ: ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದ ಸಾಹುಕಾರ...

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 22:17 IST
Last Updated 19 ಜೂನ್ 2021, 22:17 IST
ಅಪ್ಪ ಶ್ರೀನಿವಾಸ ಮೂರ್ತಿ ಜೊತೆ ಮೋನಿಕಾ
ಅಪ್ಪ ಶ್ರೀನಿವಾಸ ಮೂರ್ತಿ ಜೊತೆ ಮೋನಿಕಾ   

ಬೆಂಗಳೂರು: ನಮ್ಮದು ತೀರಾ ಬಡ ಕುಟುಂಬ. ಅಪ್ಪ ಅಮ್ಮನಿಗೆ ನಾನೊಬ್ಬಳೇ ಮಗಳು. ಹೀಗಾಗಿ ತುಂಬಾ ಮುದ್ದಾಗಿ ಸಾಕಿದ್ದಾರೆ. ಅಪ್ಪ ಖಾಸಗಿ ಶಾಲೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದರು. ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಜೀವನ ನಿರ್ವಹಣೆಯೇ ಕಷ್ಟವಿತ್ತು. ಹಾಗಂತ ಅವರು ನನಗೇನು ಕಡಿಮೆ ಮಾಡಿರಲಿಲ್ಲ. ಏನೇ ಕೇಳಿದರೂ ಮರು ಮಾತನಾಡದೇ ಕೊಡಿಸುತ್ತಿದ್ದರು.

ನಾನು ಚೆನ್ನಾಗಿ ಓದಿ ದೊಡ್ಡ ಅಧಿಕಾರಿಯಾಗಬೇಕು ಎಂಬ ಆಸೆ ಅವರಿಗಿತ್ತು. ಅದನ್ನು ಅನೇಕ ಬಾರಿ ನನ್ನ ಬಳಿ ಹೇಳಿಕೊಂಡಿದ್ದರು. ತನ್ನ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಅದನ್ನು ತೋರ್ಪಡಿಸದೆ ಸದಾ ನಗುತ್ತಲೇ ಇರುತ್ತಿದ್ದರು. ಹಬ್ಬ ಹರಿದಿನಗಳಿಗೆ ಕೇಳದಿದ್ದರೂ ಹೊಸ ಬಟ್ಟೆ ತಂದು ಕೊಡುತ್ತಿದ್ದರು. ರಜೆ ಇದ್ದಾಗ ಅಮ್ಮ ಹಾಗೂ ನನ್ನನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಇಷ್ಟದ ತಿನಿಸುಗಳನ್ನು ಕೊಡಿಸುತ್ತಿದ್ದರು. ಆಗಾಗ ದೇವಸ್ಥಾನಗಳಿಗೂ ಕರೆದೊಯ್ಯುತ್ತಿದ್ದರು.

ಕೋವಿಡ್‌ನಿಂದಾಗಿ ಹೋದ ತಿಂಗಳು ಅಪ್ಪ ತೀರಿಕೊಂಡರು. ಆ ಆಘಾತದಿಂದ ನಾನು ಇನ್ನೂ ಹೊರಬಂದಿಲ್ಲ. ಮನೆಯಲ್ಲಿ ಕುಂತರೂ, ನಿಂತರೂ ಅವರ ನೆನಪು ಕಾಡುತ್ತದೆ. ಅವರಿಲ್ಲ ಎಂಬುದನ್ನು ನೆನೆದಾಗ ಮನಸ್ಸು ಭಾರವಾಗುತ್ತದೆ. ಕಣ್ಣುಗಳು ತೇವಗೊಳ್ಳುತ್ತವೆ.

ADVERTISEMENT

ಅಪ್ಪ ನನ್ನ ಬಳಿ ತುಂಬಾ ಆತ್ಮೀಯವಾಗಿದ್ದರು. ಅವರ ಹತ್ತಿರ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದೆ. ಈಗ ಏಕಾಂಗಿ ಭಾವ ಕಾಡುತ್ತಿದೆ. ಮನೆಯಿಂದ ಹೊರಗೆ ಹೋಗಲು ಬೇಸರವಾಗುತ್ತಿದೆ. ಅವರ ಆಸೆಯಂತೆ ದೊಡ್ಡ ಅಧಿಕಾರಿಯಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂದುಕೊಂಡಿದ್ದೆ. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು.

ಅಪ್ಪ ಎಲ್ಲೂ ಹೋಗಿಲ್ಲ. ಅವರು ನಮ್ಮ ಜೊತೆಗೇ ಇದ್ದಾರೆ. ಹೀಗಂದುಕೊಂಡೆ ದಿನಗಳನ್ನು ದೂಡಬೇಕಾಗಿದೆ. ಅದೀಗ ಅನಿವಾರ್ಯ ಕೂಡ.

ಮೋನಿಕಾ, ಸುಗ್ಗಟ್ಟ ನಿವಾಸಿ, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.