ವಿಧಾನಸೌಧ
ಬೆಂಗಳೂರು: ಸಾರ್ವಜನಿಕ ಉದ್ದಿಮೆಗಳು ತಮ್ಮ ಉಳಿತಾಯದ ಠೇವಣಿಗಳಿಂದ ವಿಶೇಷ ಲಾಭಾಂಶ ಎಂದು ಶೇ 30ರಷ್ಟು ಮೊತ್ತವನ್ನು ಖಜಾನೆಗೆ ವರ್ಗಾಯಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದು ಉದ್ದಿಮೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಲಾಭದಲ್ಲಿರುವ ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಸಾಲದ ರೂಪದಲ್ಲಿ ಹಣ ನೀಡಬೇಕು. ಅದಕ್ಕೆ ಬಡ್ಡಿ ನೀಡಲಾಗುವುದು ಎಂದು ಸಚಿವ ಸಂಪುಟ ಸಭೆ ಇತ್ತೀಚೆಗೆ ತೀರ್ಮಾನ ತೆಗೆದುಕೊಂಡಿದೆ. ಅದರ ಬೆನ್ನಲ್ಲೇ, ವಿಶೇಷ ಲಾಭಾಂಶದ ರೂಪದಲ್ಲಿ ಮತ್ತಷ್ಟು ಮೊತ್ತವನ್ನು ಕಸಿಯುವ ಸರ್ಕಾರದ ಸುತ್ತೋಲೆ ಉದ್ದಿಮೆಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.
ಸಾರ್ವಜನಿಕ ವಲಯದ ಉದ್ದಿಮೆಗಳು ವಾರ್ಷಿಕ ನಿಯಮಿತವಾಗಿ ಶೇ 30 ಲಾಭಾಂಶ (ಡಿವಿಡೆಂಡ್) ಪಾವತಿಸುತ್ತಿವೆ. ಹಿಂದೆ ಇದು ಶೇ 12 ಇತ್ತು. ಅದನ್ನು ಬಿಜೆಪಿ ಸರ್ಕಾರವಿದ್ದಾಗ 2022ರಲ್ಲಿ ಶೇ 30ಕ್ಕೆ ಏರಿಸಲಾಗಿದೆ.
‘ರಾಜ್ಯದಲ್ಲಿಒಟ್ಟು 140 ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಕಂಪನಿಗಳಿವೆ. ಇದರಲ್ಲಿ 19 ಉದ್ದಿಮೆಗಳು ಲಾಭದಲ್ಲಿ ನಡೆಯುತ್ತಿವೆ. ಉಳಿದವು ನಷ್ಟದಲ್ಲಿವೆ. ಈ ಕಂಪನಿಗಳು ಆಧುನೀಕರಣ ಮತ್ತು ವಿಸ್ತರಣೆ ಚಟುವಟಿಕೆಗಳಿಗೆ ತಮ್ಮ ಸಂಪನ್ಮೂಲಗಳನ್ನೇ ಬಳಸುತ್ತಿವೆ. ಈ ಕಾರ್ಯಗಳಿಗೆ ಸರ್ಕಾರ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ಕಾರದ ಸುತ್ತೋಲೆಯಿಂದ ಕಂಪನಿಗಳ ಆಧುನೀಕರಣ, ವಿಸ್ತರಣಾ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಸಾರ್ವಜನಿಕ ಉದ್ದಿಮೆಗಳು ಖಾಸಗಿ ಕಂಪನಿಗಳಿಂದ ಭಾರಿ ಪೈಪೋಟಿ ಎದುರಿಸುತ್ತಿದ್ದು, ಕಾಲ– ಕಾಲಕ್ಕೆ ಆಧುನೀಕರಣಕ್ಕೆ ಒಗ್ಗಿಕೊಳ್ಳದೇ ಹೋದರೆ ಕಂಪನಿಗಳು ನಷ್ಟಕ್ಕೀಡಾಗುವುದು ನಿಶ್ಚಿತ. ಹಲವು ಸಂಸ್ಥೆಗಳಲ್ಲಿ ಸಿಬ್ಬಂದಿ ವೇತನ, ಪಿಂಚಣಿ ಪಾವತಿಗೂ ಕಷ್ಟವಾಗಿರುವುದರಿಂದ ಈ ಕಂಪನಿಗಳು ಸರ್ಕಾರಕ್ಕೆ ಎಲ್ಲಿಂದ ಹಣ ಕೊಡಬೇಕು’ ಎಂದು ಅವರು ಪ್ರಶ್ನಿಸಿದರು.
‘ಬಹುಪಾಲು ಸಾರ್ವಜನಿಕ ಉದ್ದಿಮೆಗಳು ತಮ್ಮ ಸಂಪನ್ಮೂಲದಿಂದಲೇ ವೇತನ, ಪಿಂಚಣಿ, ಪರಿಹಾರ ಇತ್ಯಾದಿಗಳನ್ನು ಪಾವತಿಸಬೇಕು. ಇದಕ್ಕಾಗಿ ಬ್ಯಾಂಕ್‌ಗಳ ವಿವಿಧ ಖಾತೆಗಳಲ್ಲಿ ಹಣವನ್ನು ಠೇವಣಿ ರೂಪದಲ್ಲಿ ಇಡಲಾಗುತ್ತದೆ. ಹಲವು ವರ್ಷಗಳಿಂದ ಜಮೆ ಮಾಡಿದ ಮೊತ್ತ ದೊಡ್ಡ ಇಡುಗಂಟಾಗಿ ಗೋಚರಿಸುತ್ತದೆ. ಹೀಗಾಗಿ ಇದರ ಮೇಲೆ ಕಣ್ಣು ಬಿದ್ದಿದೆ’ ಎಂದೂ ಅವರು ಹೇಳಿದರು.
ಲಾಭಾಂಶ ಕೊಡಲು ನಕಾರ: ಸರ್ಕಾರ ಪಾವತಿಗೆ ಗಡುವು ನೀಡಿ, ಎರಡು ತಿಂಗಳು ಕಳೆದರೂ ಯಾವುದೇ ಕಂಪನಿ ಶೇ 30 ವಿಶೇಷ ಲಾಭಾಂಶ ಪಾವತಿಸಿಲ್ಲ. ಸೆಪ್ಟೆಂಬರ್‌ನಿಂದ ಒತ್ತಡ ಹೇರುತ್ತಿದ್ದರೂ ಯಾವುದೇ ಸಂಸ್ಥೆ ವಿಶೇಷ ಲಾಭಾಂಶ ವರ್ಗಾಯಿಸಲು ಮುಂದಾಗಿಲ್ಲ ಎಂದು ಗೊತ್ತಾಗಿದೆ.
ಸುತ್ತೋಲೆಯಲ್ಲಿ ಏನಿದೆ?
‘ಸಾರ್ವಜನಿಕ ಉದ್ದಿಮೆಗಳು 2024ರ ಮಾರ್ಚ್ ಅಂತ್ಯಕ್ಕೆ ಅನ್ವಯಿಸುವ ಲೆಕ್ಕಪತ್ರಗಳ ಪ್ರಕಾರ ಮತ್ತು ಎಲ್ಲ ಬ್ಯಾಂಕ್ ಖಾತೆಗಳಲ್ಲಿನ ನಿಯಮಿತ/ನಿಶ್ಚಿತ ಠೇವಣಿಗಳನ್ನು ಒಳಗೊಂಡಂತೆ ನಗದು ಮತ್ತು ನಗದೇತರ ಉಳಿತಾಯದ ಕನಿಷ್ಠ ಶೇ 30 ಮಧ್ಯಂತರ ಲಾಭಾಂಶವನ್ನು 2023–24 ಆರ್ಥಿಕ ವರ್ಷದ ವಿಶೇಷ ಲಾಭಾಂಶವೆಂದು ಪಾವತಿಸಬೇಕು. ಪಾವತಿಸದೇ ಇದ್ದರೆ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಆರ್ಥಿಕ ಇಲಾಖೆ ಉಪಕಾರ್ಯದರ್ಶಿ ಇಕ್ರಂ ಷರೀಫ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಉದ್ದಿಮೆಗಳು ಸ್ಪಂದಿಸದ ಕಾರಣ ಅಕ್ಟೋಬರ್ ಮತ್ತು ನವೆಂಬರ್‌ನಲ್ಲೂ ಜ್ಞಾಪನಾಪತ್ರಗಳನ್ನು ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.