ADVERTISEMENT

ಹೆಣ್ಣು ಅಂದ್ರೆ ಅಷ್ಟೊಂದು ಕೇವಲವೇ? ಹೈಕೋರ್ಟ್ ಪ್ರಶ್ನೆ

ಭ್ರೂಣ ಹತ್ಯೆ ಪ್ರಕರಣದ ತನಿಖೆ ತಡೆಗೆ ನಕಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 14:39 IST
Last Updated 6 ಫೆಬ್ರುವರಿ 2026, 14:39 IST
ನ್ಯಾ.ಎಂ.ನಾಗಪ್ರಸನ್ನ
ನ್ಯಾ.ಎಂ.ನಾಗಪ್ರಸನ್ನ   

ಬೆಂಗಳೂರು: ‘ಹೆಣ್ಣು ಅಂದರೆ ಅಷ್ಟೊಂದು ಕೇವಲವೇ’ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ಹೆಣ್ಣು ಭ್ರೂಣ ಹತ್ಯೆ ಆರೋಪಿಗಳ ವಿರುದ್ಧದ ತನಿಖೆಗೆ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ.

‘ನಮ್ಮ ವಿರುದ್ಧ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಈ ಸಂಬಂಧ ನಗರದ 46ನೇ ಹೆಚ್ಚುವರಿ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು’ ಎಂದು ಕೋರಿ ಚನ್ನಪಟ್ಟಣ ತಾಲ್ಲೂಕು ಮಾಲೂರಿನ ಶಾರದಮ್ಮ (48) ಹಾಗೂ ಇವರ ಪತಿ ದಾಸೇಗೌಡ (60) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಕೆ.ಹೇಮಂತ ಕುಮಾರ್, ’ಈ ಪ್ರಕರಣದಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ಆಧಾರರಹಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಅರ್ಜಿದಾರರಿಗೂ ಇದಕ್ಕೂ ಸಂಬಂಧವಿಲ್ಲ. ನಿರ್ದಿಷ್ಟ ಆಪಾದಿತರ ಬದಲಿಗೆ ಕೈಗೆ ಸಿಕ್ಕವರನ್ನೆಲ್ಲಾ ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣದ ತನಿಖೆಗೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದನ್ನು ಅಲ್ಲಗಳೆದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಈ ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಶಾರದಮ್ಮ, ಯಾರು ಭ್ರೂಣ ಪರೀಕ್ಷೆ ಮಾಡಿಸಿಕೊಳ್ಳ ಬಯಸುತ್ತಾರೆಯೋ ಅಂತಹ ಗರ್ಭಿಣಿಯ ಹಸ್ತದಲ್ಲಿ ತಮ್ಮ ಹೆಸರು ಬರೆದು ನಿರ್ದಿಷ್ಟ ಸ್ಕ್ಯಾನಿಂಗ್‌ ಕೇಂದ್ರಕ್ಕೆ ಕಳುಹಿಸುತ್ತಾರೆ. ಸ್ಕ್ಯಾನಿಂಗ್‌ ಕೇಂದ್ರದವರು ಶಾರದಮ್ಮನ ಹೆಸರು ಇರುವ ಮಹಿಳೆಯನ್ನು ಪರೀಕ್ಷಿಸಿ ಭ್ರೂಣದ ಲಿಂಗ ಯಾವುದೆಂಬುದನ್ನು ಶಾರದಮ್ಮನಿಗೆ ಫೋನ್‌ ಮುಖಾಂತರ ತಿಳಿಸುತ್ತಾರೆ’ ಎಂದರು.

’ಸ್ಕ್ಯಾನಿಂಗ್ ಕೇಂದ್ರದಿಂದ ಬಂದ ವರದಿ ಬಂದ ಆಧರಿಸಿ, ಹೆಣ್ಣು ಮಗುವಿನ ಭ್ರೂಣ ಇದ್ದು ಅದನ್ನು ತೆಗೆಸಲು ಬಯಸುವುದಾದರೆ ಶಾರದಮ್ಮನಿಗೆ ₹25 ಸಾವಿರ ಪಾವತಿಸಬೇಕು. ಈ ಹಣ ಪಡೆದ ಶಾರದಮ್ಮನೇ ಗರ್ಭಪಾತದ ಮಾತ್ರೆಗಳನ್ನು ನೀಡುತ್ತಾರೆ. ಇವರದ್ದು ಒಂದು ದೊಡ್ಡ ಜಾಲವಿದ್ದು, ಕಾನೂನಿನ ಕುಣಿಕೆಗೆ ಪಕ್ಕಾಗದಂತೆ ಹುಷಾರಾಗಿ ಈ ಕುಕೃತ್ಯ ಎಸಗುತ್ತಿದ್ದಾರೆ. ಅರ್ಜಿದಾರರ ವಿರುದ್ಧ ಇಂತಹುದೇ ಆರೋಪಗಳ ಮತ್ತಷ್ಟು ದೂರುಗಳಿವೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ತನಿಖೆಗೆ ತಡೆ ನೀಡಲು ಖಂಡಿತ ನುಡಿಯಲ್ಲಿ ನಿರಾಕರಿಸಿ ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿತು. 

ಎಷ್ಟೊಂದು ಕ್ರೂರವಾಗಿ ಒಂದು ಜೀವವನ್ನು ಕೊಲ್ಲುತ್ತೀರಲ್ಲ? ಹೆಣ್ಣು ಮಗು ಎಂದರೆ ಅಷ್ಟೊಂದು ತಾತ್ಸಾರವೇ? ಇಂತಹುದೊಂದು ಅಭಿಶಾಪದ ದಹನೀಯ ಮನೋವೃತ್ತಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕಿದೆ.
ನ್ಯಾ.ಎಂ.ನಾಗಪ್ರಸನ್ನ

ಮಾತ್ರೆ ನುಂಗಿಸಿ ಗರ್ಭಪಾತ..!

‘ಭ್ರೂಣ ಪರೀಕ್ಷೆ ಮಾಡಿಸಿಕೊಳ್ಳುವ ಇಚ್ಛೆ ಹೊಂದಿದ ಗರ್ಭಿಣಿಯರನ್ನು ಜಾಲದ ಬಲೆಯಲ್ಲಿ ಕಡೆವಿ ನಾಜೂಕಿನಿಂದ ಸಂವಹನ ಸಾಧಿಸಿ ಸಂಜ್ಞೆಗಳ ಮೂಲಕ ಆರೋಪಿಗಳು ಕಾರ್ಯಾಚರಣೆ ನಡೆಸುತ್ತಾರೆ. ಮಾತ್ರೆಗಳನ್ನು ನುಂಗಿಸುವುದು ಮತ್ತು ಗುಪ್ತಾಂಗದಲ್ಲಿ ಮಾತ್ರೆ ಇರಿಸಿ ಗರ್ಭಪಾತವಾಗುವಂತೆ ಮಾಡುವುದು, ಲಿಂಗ ಪತ್ತೆ ಹಾಗೂ ಹತ್ಯೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ರೀತಿಯಲ್ಲಿ ಸಹಕರಿಸುವುದು ಇವರ ಚಟುವಟಿಕೆಯ ಭಾಗ’ ಎಂಬುದು ಎಫ್‌ಐಆರ್‌ ತಾತ್ಪರ್ಯ.

ಸಾರ್ವಜನಿಕರಿಗೆ ವೈದ್ಯರೆಂದು ವಂಚನೆ ಮಾಡುತ್ತಿದ್ದ ಮತ್ತು ವೃತ್ತಿಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಪಲ್ಲವಿ ಸೇರಿದಂತೆ ಚನ್ನಕೇಶವ, ಭಾಗ್ಯಮ್ಮ, ಬೆಳಗಾವಿಯ ಲಕ್ಷ್ಮಿ ಮತ್ತು ಅರ್ಜಿದಾರರ ವಿರುದ್ಧ ವೈದ್ಯಕೀಯ ಗರ್ಭಪಾತ ಕಾಯ್ದೆ–1971ರ ಕಲಂ 4 ಮತ್ತು ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 3(5) ಮತ್ತು 91ರ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.