ADVERTISEMENT

ಕಲಬುರ್ಗಿಯ ಬಹುತೇಕ ಫೀವರ್‌ ಕ್ಲಿನಿಕ್‌ಗಳು ನಿಷ್ಕ್ರಿಯ

ಕಂಟೇನ್ಮೆಂಟ್‌ ಝೋನ್‌ಗಳಲ್ಲಿ ಜ್ವರ ತಪಾಸಣಾ ಕೇಂದ್ರಗಳಿಗೆ ಬಾರದ ಜನ

ಸಂತೋಷ ಈ.ಚಿನಗುಡಿ
Published 12 ಜುಲೈ 2020, 4:00 IST
Last Updated 12 ಜುಲೈ 2020, 4:00 IST

ಕಲಬುರ್ಗಿ: ಕೊರೊನಾ ಸೋಂಕು ಪತ್ತೆಗಾಗಿ ಜಿಲ್ಲೆಯಲ್ಲಿ ತೆರೆಯಲಾದ 23 ಫೀವರ್‌ ಕ್ಲಿನಿಕ್‌ಗಳ (ಜ್ವರ ಸಮೀಕ್ಷಾ ಕೇಂದ್ರ) ಪೈಕಿ ಬಹುತೇಕ ಕ್ಲಿನಿಕ್‌ಗಳು ನಿಷ್ಕ್ರಿಯವಾಗಿವೆ. ಕಂಟೇನ್ಮೆಂಟ್‌ ಝೋನ್‌ಗಳಲ್ಲಿ ತೆರೆದ ಈ ಕ್ಲಿನಿಕ್‌ಗಳಿಗೆ ಜನರೇ ಬರುತ್ತಿಲ್ಲ.

ಕೋವಿಡ್‌ ಶಂಕಿತರನ್ನು ಪ್ರಾಥಮಿಕ ಹಂತದಲ್ಲೇ ಪ‍ತ್ತೆ ಮಾಡಲು ಮಾರ್ಚ್‌ 30ರಂದು ಜಿಲ್ಲೆಯಲ್ಲಿ ಜ್ವರ ಸಮೀಕ್ಷಾ ಕೇಂದ್ರಗಳನ್ನು ಆರಂಭಿಸಲಾಯಿತು. ಜನರು ಆಸ್ಪತ್ರೆಗೆ ದಾಖಲಾಗುವಂತಹ ಸ್ಥಿತಿ ತಲುಪುವ ಮುನ್ನವೇ ಲಕ್ಷಣಗಳನ್ನು ಗುರುತಿಸಲು ಈ ಮಾರ್ಗ ಕಂಡುಕೊಳ್ಳಲಾಗಿತ್ತು. ಆರಂಭದ ಒಂದು ವಾರ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ತೆರಳಿ ಜನರಲ್ಲಿ ಅರಿವು ಮೂಡಿಸಿದರು. ಹೀಗಾಗಿ, ಕೆಲ ದಿನ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತು.

ಮೇ 25ರವರೆಗೂ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಿದರೂ ಬೆರಳೆಣಿಕೆಯಷ್ಟು ಜನ ಮಾತ್ರ ತಪಾಸಣೆ ಮಾಡಿಸಿಕೊಂಡರು. ಕೆಲ ಕಡೆ ವಾರಗಟ್ಟಲೇ ಒಬ್ಬರೂ ಬರಲಿಲ್ಲ. ನಗರದಲ್ಲಿ ಸದ್ಯಕ್ಕೆ 17 ಪೈಕಿ 5 ಕ್ಲಿನಿಕ್‌ಗಳು ಮಾತ್ರ ಕ್ರಿಯಾಶೀಲವಾಗಿವೆ.

ADVERTISEMENT

824 ಶಂಕಿತರ ಪತ್ತೆ: ಜಿಲ್ಲೆಯಲ್ಲಿ ಮಾರ್ಚ್‌ 30ರಿಂದ ಜುಲೈ 11ರವರೆಗೆ ಒಟ್ಟು 7950 ಮಂದಿಯನ್ನು ಈ ಕ್ಲಿನಿಕ್‌ಗಳಲ್ಲಿ ಸ್ಕ್ರೀನಿಂಗ್‌ ಮಾಡಲಾಗಿದೆ. ಅವರಲ್ಲಿ 824 ಮಂದಿಯನ್ನು ಕೋವಿಡ್ ಶಂಕಿ ತರು ಎಂದು ಪರಿಗಣಿಸಿ, ಕ್ವಾರಂಟೈನ್‌ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ.

ಸೇಡಂ ತಾಲ್ಲೂಕು ಆಸ್ಪತ್ರೆಯ ಕ್ಲಿನಿಕ್‌ ನಲ್ಲಿ ಅತಿ ಹೆಚ್ಚಿ ಅಂದರೆ 3481 ಮಂದಿಯನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಇದರಲ್ಲಿ 537 ಮಂದಿಯ ಕ್ವಾರಂಟೈನ್‌ಗೆ ಶಿಫಾರಸು ಮಾಡಲಾಗಿದೆ. ಆದರೆ, ಕಲಬುರ್ಗಿ ನಗರದ ಮುಸ್ಲಿಂ ಚೌಕ್‌ನಲ್ಲಿ ಕಡಿಮೆ ಅಂದರೆ ಕೇವಲ ನಾಲ್ವರು ಮಾತ್ರ ತಪಾಸಣೆಗೆ ಒಳಗಾಗಿದ್ದು, ಯಾರಿಗೂ ಕೊರೊನಾ ಶಂಕೆ ಕಂಡುಬಂದಿಲ್ಲ.

ನಗರದ ಮಾಣಿಕೇಶ್ವರಿ ನಗರದಲ್ಲಿ 348, ತಾರಪೈಲ್‌ ಬಡಾವಣೆ– 315, ಶಿವಾಜಿ ನಗರದಲ್ಲಿ 292, ನೂರಿ ಪಬ್ಲಿಕ್‌ ಸ್ಕೂಲ್‌ನಲ್ಲಿ 230, ನ್ಯೂರೆಹಮತ್‌ ನಗರದಲ್ಲಿ 226 ಕೇಸ್‌ ಬಂದಿದ್ದು ಬಿಟ್ಟರೆ, ಉಳಿದೆಡೆ ಭೇಟಿ ನೀಡಿದವರ ಸಂಖ್ಯೆ 10ರ ಸಂಖ್ಯೆ ದಾಟಿಲ್ಲ.

ಅದೇ ರೀತಿ ಜಿಲ್ಲೆಯ ಅಫಜಲಪುರ– 816, ಚಿಂಚೋಳಿ– 653, ಚಿತ್ತಾಪುರ– 289, ಜೇವರ್ಗಿ– 280, ಆಳಂದ– 188, ಶಹಾಬಾದ್‌– 199, ವಾಡಿ–88 ಜನರಿಗೆ ತಪಾಸಣೆ ಮಾಡಲಾಗಿದೆ.

ನಿಂತ ಆಂಬುಲೆನ್ಸ್‌: ನಗರದಲ್ಲಿರುವ 11 ಆರೋಗ್ಯ ಕೇಂದ್ರಗಳು, 5 ಸಮುದಾಯ ಆರೋಗ್ಯ ಕೇಂದ್ರ, ಆಯುರ್ವೇದಿಕ್‌ ಚಿಕಿತ್ಸಾಲಯ ಮತ್ತು 7 ತಾಲ್ಲೂಕು ಆಸ್ಪತ್ರೆಗಳಲ್ಲೂ ಫೀವರ್‌ ಕ್ಲಿನಿಕ್‌ ತೆರೆಯಲಾಗಿತ್ತು. ಒಬ್ಬ ವೈದ್ಯಾಧಿಕಾರಿ, ಒಬ್ಬ ಪ್ರಯೋಗಾಲಯ ತಜ್ಞ, ಒಬ್ಬ ಸ್ಟಾಫ್‌ ನರ್ಸ್‌ ಹಾಗೂ ಒಬ್ಬ ಡಿ ದರ್ಜೆ ಸಹಾಯಕ; ಹೀಗೆ ನಾಲ್ವರ ತಂಡ ನೀಡಲಾಗಿತ್ತು.

ಈ ಕೇಂದ್ರಗಳು ದಿನದ 24 ಗಂಟೆ ತೆರೆದು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ ಮತ್ತು ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ; ಹೀಗೆ ಮೂರು ಸರದಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಪ್ರತಿ ಕೇಂದ್ರಕ್ಕೆ 1 ಆಂಬುಲೆನ್ಸ್‌ ಕೂಡ ನೀಡ
ಲಾಗಿದ್ದು, ಇವುಗಳ ಬಳಕೆ ಅಷ್ಟಕ್ಕಷ್ಟೇ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.