ADVERTISEMENT

ಯಾರದ್ದೇ ಪೌರತ್ವ ರದ್ದಾದರೂ ಹೋರಾಟ: ಬಾಬಾ ರಾಮದೇವ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 15:09 IST
Last Updated 29 ಜನವರಿ 2020, 15:09 IST
ಬಾಬಾ ರಾಮದೇವ್‌
ಬಾಬಾ ರಾಮದೇವ್‌   

ಹುಬ್ಬಳ್ಳಿ: ‘ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಭಾರತದ ಯಾವುದೇ ನಾಗರಿಕನ ಪೌರತ್ವ ರದ್ದಾದರೆ, ನಾನೂ ಹೋರಾಟ ಮಾಡುತ್ತೇನೆ’ ಎಂದು ಪತಂಜಲಿ ಯೋಗ ಪೀಠದ ಸಂಸ್ಥಾಪಕ ಬಾಬಾ ರಾಮದೇವ್‌ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಎಎ, ಎನ್‌ಆರ್‌ಸಿ ಬಗ್ಗೆ ಮುಸ್ಲಿಮರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ಯಾರದ್ದೂ ಪೌರತ್ವ ರದ್ದಾಗುವುದಿಲ್ಲ. ದೇಶದ ಮೇಲೆ ಹಿಂದೂಗಳಿರುವಷ್ಟೇ ಹಕ್ಕು ಮುಸ್ಲಿಮರಿಗೂ ಇದೆ’ ಎಂದರು.

‘ದೇಶದ ಆರ್ಥಿಕ ಪ್ರಗತಿಗೆ ಹಿಂದೂ–ಮುಸ್ಲಿಮರು ಒಗ್ಗಟ್ಟಾಗಿ ಹೋಗಬೇಕು. ಶೇ 99ರಷ್ಟು ಮುಸ್ಲಿಮರು ದೇಶಭಕ್ತರಾಗಿದ್ದಾರೆ. ಶೇ 1ರಷ್ಟು ಮಂದಿ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬಹಿಷ್ಕರಿಸಲು ಮುಸ್ಲಿಮರು ಮುಂದಾಗಬೇಕು’ ಎಂದು ಹೇಳಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ವಿರೋಧಿ ಮನೋಭಾವ ಹೊಂದಿಲ್ಲ. ಹಿಂದೂಗಳಷ್ಟೇ ಮುಸ್ಲಿಮರದ್ದೂ ಹಕ್ಕಿದೆ. ಅವರೊಂದಿಗೆ ಜೊತೆಯಾಗಿ ಮುನ್ನಡೆಯಬೇಕು ಎಂದು ಅವರು ಹಲವಾರು ಬಾರಿ ಹೇಳಿದ್ದಾರೆ’ ಎಂದು ಅವರು ತಿಳಿಸಿದರು.

ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರಸ್ವಾಮೀಜಿ, ಸ್ವಾಮಿ ವಿವೇಕಾನಂದ, ದಯಾನಂದ ಅವರಂಥಸಂತರಿಗೆ ಭಾರತರತ್ನ ನೀಡಬೇಕು ಎಂದು ಹೇಳಿದರು.

ಕಪ್ಪು ಹಣ ವಾಪಸ್ ತರಲು, ಭ್ರಷ್ಟಾಚಾರ ತಡೆಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.